ಹುಬ್ಬಳ್ಳಿ :ಜಿಂದಾಲ್ ಕಂಪನಿಗೆ ಮಾರಾಟ ಮಾಡುವ ಭೂಮಿಯ ಬೆಲೆ ಅತೀ ಕಡಿಮೆಯಾಗಿದ್ದು, ಸರ್ಕಾರಕ್ಕೆ ಬರಬೇಕಾದ ಹಣಕ್ಕೆ ಕೊಕ್ಕೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಭೂಮಿ ನೀಡಿಕೆ ವಿಚಾರವನ್ನು ಸದನದಲ್ಲಿ ಚರ್ಚೆ ನಡೆಸಿ ಮರುಪರಿಶೀಲಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಒತ್ತಾಯಿಸಿದರು.
ಜಿಂದಾಲ್‌ಗೆ ಭೂಮಿ ವಿವಾದ: ಸರ್ಕಾರದ ಆದಾಯಕ್ಕೆ ಕೊಕ್ಕೆ- ಎಸ್.ಆರ್ ಹಿರೇಮಠ ವಿರೋಧ
ರಾಜ್ಯ ಸರ್ಕಾರ ಅತ್ಯವಸರದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿರುವ 3,667 ಎಕರೆ ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ಮುಂದಾಗಿದೆ. ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿಗೆ ಕೊಕ್ಕೆ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅತ್ಯವಸರದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 3,667 ಎಕರೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿದೆ. ಕಡಿಮೆ ಬೆಲೆಗೆ ಭೂಮಿ ಮಾರಾಟಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿ ದುಡ್ಡಿಗೆ ಕೊಕ್ಕೆ ಬೀಳುತ್ತದೆ. ಈ ಬಗ್ಗೆ ಸರ್ಕಾರ ಮತ್ತೊಮ್ಮೆ ಸದನದಲ್ಲಿ ಮರುಪರಿಶೀಲನೆಗೆ ಮುಂದಾಗಬೇಕು. ಕಾರ್ಖಾನೆಗೆ ಜಮೀನು ಪರಭಾರೆ ಮಾಡುವ ಬದಲು ಲೀಸ್‌ಗೆ ಭೂಮಿ ಕೊಟ್ಟರೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದರು.
ಈ ಬಗ್ಗೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ಸರ್ಕಾರ ಜಿಂದಾಲ್‌ಗೆ ಭೂಮಿ ಮಾರಾಟ ವಿಚಾರವನ್ನು ಕೈಬಿಟ್ಟು ಲೀಸ್ ಆಧಾರದ ಮೇಲೆ ಮುಂದುವರೆಸಬೇಕು. ಮೊದಲೇ ಜಿಂದಾಲ್ ಕಂಪನಿ ಸಂಪೂರ್ಣ ಅವ್ಯವಹಾರದಲ್ಲಿ ಮುಳುಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಬಸವರಾಜ್ ಹೊರಟ್ಟಿ, ಹೆಚ್.ವಿಶ್ವನಾಥ್ ಅವರನ್ನು ಈ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.