ಹುಬ್ಬಳ್ಳಿ:ಕೋವಿಡ್ ವಿರುದ್ಧದ ಹೋರಾಟದಲ್ಲಿ ಹಲವು ಸಾಧನೆಗೈದಿರುವ ಕಿಮ್ಸ್ ಆಸ್ಪತ್ರೆಯು ಸರ್ಕಾರದ ಹಲವು ಸೌಲಭ್ಯಗಳನ್ನು ಬಾಚಿಕೊಂಡು ಉತ್ತಮ ಸೇವೆಯತ್ತ ದಾಪುಗಾಲಿಟ್ಟಿದೆ.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆ ಜಾರಿಯಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಈ ಮೂಲಕ ಆಸ್ಪತ್ರೆಯ ಗೌರವ ಮತ್ತಷ್ಟು ಇಮ್ಮಡಿಗೊಂಡಿದೆ. ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ, ಸೋಂಕಿತರಿಗೆ ಡಯಾಲಿಸಿಸ್ ಸೇರಿದಂತೆ ಸಾಕಷ್ಟು ಸಾಧನೆ ಮಾಡಿದ ಕಿಮ್ಸ್ ರಾಜ್ಯದಲ್ಲಿಯೇ ಅಗ್ರ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ...ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ಏಪ್ರಿಲ್ನಿಂದ ನ. 12ರವರೆಗೆ ಎಬಿಎಆರ್‌ಕೆ ಯೋಜನೆಯಡಿ 5,741 ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ರಾಜ್ಯದಲ್ಲೇ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ ದಾಖಲೆ ನಿರ್ಮಿಸಿದ್ದು, ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳನ್ನು ಕೂಡ ಹಿಂದಿಕ್ಕಿ ದಾಖಲೆ ಬರೆದಿದೆ. 4,522 ರೋಗಿಗಳಿಗೆ ಚಿಕಿತ್ಸೆ ನೀಡಿರುವ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆ ದ್ವಿತೀಯ ಸ್ಥಾನದಲ್ಲಿದೆ.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅತಿ ಹೆಚ್ಚು ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಹೊಂದಿದ ಕೀರ್ತಿಗೂ ಪಾತ್ರವಾಗಿದೆ. ಕಿಮ್ಸ್ ಸರಾಸರಿ 11 ಕೆಎಲ್ ಆಕ್ಸಿಜನ್ ಬಳಸುತ್ತದೆ. ರಾಜ್ಯದಲ್ಲೇ ಎಲ್ಲಿಯೂ ಇಷ್ಟು ಪ್ರಮಾಣದ ಆಕ್ಸಿಜನ್ ಸಂಗ್ರಹದ ಆಸ್ಪತ್ರೆಯಿಲ್ಲ. ಕೋವಿಡ್ ರೋಗಿಗಳ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಿಮ್ಸ್ಗೆ ಕೇಂದ್ರ, ರಾಜ್ಯ ಹಾಗೂ ಜಿಲ್ಲಾಡಳಿತ ಸಾಕಷ್ಟು ಅನುದಾನ ಬಿಡುಗಡೆ ಮಾಡಿವೆ. ಇದಲ್ಲದೆ ಹಲವು ಸಂಘ-ಸಂಸ್ಥೆಗಳು, ಕಂಪನಿಗಳು ದೇಣಿಗೆ ನೀಡಿವೆ. ಅದೆಲ್ಲವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಕಿಮ್ಸ್ ಯೋಜನೆ ರೂಪಿಸಿದೆ.
ಸಂಗ್ರಹವಾದ ದೇಣಿಗೆಯಿಂದ ವೆಂಟಿಲೇಟರ್ ಬೆಡ್, ಕಾಟ್, ಮಾನಿಟರ್ ಸೇರಿದಂತೆ ಮೂಲ ಸೌಕರ್ಯಗಳನ್ನು ತರಿಸಿಕೊಂಡಿದೆ. ಅಲ್ಲದೆ ಮೆಡಿಸಿನ್ ವಿಭಾಗ, ಚಿಕ್ಕ ಮಕ್ಕಳ ಐಸಿಯು, ಒಬಿಜಿ ವಿಭಾಗಗಳ ಉನ್ನತೀಕರಣಕ್ಕೆ ಕೈ ಹಾಕಿದೆ. ಚಿಕ್ಕ ಮಕ್ಕಳಿಗೆ ಅತ್ಯಾಧುನಿಕ ವೆಂಟಿಲೇಟರ್ ಖರೀದಿ, ಅಪರೇಷನ್ ಥಿಯೇಟರ್ಗಳನ್ನು ತೆರೆಯಲು ಕಿಮ್ಸ್ ಮುಂದಾಗಿದೆ.