ಹುಬ್ಬಳ್ಳಿ:ಹುಬ್ಬಳ್ಳಿಯ ಕಿಮ್ಸ್ ಉತ್ತರ ಕರ್ನಾಟಕದ ಬಡ ರೋಗಿಗಳ ಆಶಾ ಕಿರಣ. ಕೋವಿಡ್ ಬಂದಾಗಲಂತೂ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡಿ, ಜೀವದಾನ ಮಾಡಿತ್ತು. ಮೊನ್ನೆಯಷ್ಟೇ ಓಪನ್ ಹಾರ್ಟ್ ಸರ್ಜರಿ ಮಾಡೋ ಪ್ರಯೋಗದಲ್ಲಿಯೂ ಯಶಸ್ವಿಯಾಗಿತ್ತು. ಇದೀಗ ಕರಡಿ ದಾಳಿಗೆ ತುತ್ತಾದ ವ್ಯಕ್ತಿಯೊಬ್ಬನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೇ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದು ಸಾಬೀತು ಮಾಡಿದೆ.
ಹೌದು, ಹೀಗೆ ದೃಶ್ಯದಲ್ಲಿ ನಿಂತಿರುವ ಫಕ್ಕಿರಪ್ಪ, ಕಾರವಾರ ಜಿಲ್ಲೆಯ ಮುಂಡಗೋಡ ತಾಲೂಕಿನವರು. ಕಳೆದ ಜುಲೈ 30 ರಂದು ತಮ್ಮ ಹೊಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಮಕ್ಕಳ ಜೊತೆಗಿದ್ದ ಕರಡಿಯೊಂದು ಏಕಾಏಕಿ ಮೈಮೇಲೆ ಎರಗಿ ಮಾರಣಾಂತಿಕವಾಗಿ ದಾಳಿ ನಡೆಸಿತ್ತು. ಪರಿಣಾಮ ಫಕ್ಕಿರಪ್ಪನ ಮೆದುಳು, ಕಣ್ಣು, ಮತ್ತು ಮುಖದ ಮೇಲ್ಭಾಗ ಶೇ. 90 ರಷ್ಟು ಚರ್ಮ ಕಿತ್ತು ವಿರೂಪಗೊಂಡಿತ್ತು.
ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜುಲೈ 30 ರಂದು ದಾಖಲು ಮಾಡಲಾಗಿತ್ತು. ಇದೀಗ ಕಿಮ್ಸ್ ಆಸ್ಪತ್ರೆಯ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸಕರ ಸಹಯೋಗದಲ್ಲಿ ಸೆಪ್ಟೆಂಬರ್ 16 ರಂದು ಸುದೀರ್ಘ 6 ಗಂಟೆಗಳ ಗಂಭೀರ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಇದರಿಂದ ಫಕ್ಕಿರಪ್ಪ ಜೀವಾಪಾಯದಿಂದ ಪಾರಾಗಿದ್ದಾರೆ.