ಹುಬ್ಬಳ್ಳಿ/ಧಾರವಾಡ:ಇಲ್ಲಿನ ಕುಸುಗಲ್ ರಸ್ತೆ ಶಬರಿ ನಗರದ ಎಸ್.ಬಿ.ಐ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆ ನಂ. 122 ರಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕುಟುಂಬ ಸಮೇತವಾಗಿ ಬಂದು ವೋಟ್ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಮತದಾನ ಜರುಗುತ್ತಿದೆ. ನಾನು ಕಾಂಗ್ರೆಸ್ನಿಂದ ಸ್ಪರ್ಧಿಸಿದ ಬಳಿಕ ಜನರಿಂದ ಹಿಂದಿಗಿಂತಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರ ಉತ್ಸಾಹ ಗಮನಿಸಿದರೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ" ಎಂದರು.
"ಮನೆ ಮನೆಗೆ ಭೇಟಿ ನೀಡಿ ಮಂಗಳವಾರ ಪ್ರಚಾರ ನಡೆಸಿದಾಗ, ಜನರು ಸಹ ಉತ್ತಮವಾಗಿ ಸ್ಪಂದಿಸಿದ್ದಾರೆ. ಮತದಾರರಿಗೆ ಬಿಜೆಪಿ ಅಭ್ಯರ್ಥಿಯ ಮುಖ ಪರಿಚಯವೇ ಇಲ್ಲ. ಹಾಗಾಗಿ ನನ್ನ ಗೆಲುವು ನಿಶ್ಚಿತ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಚುನಾವಣೆಯೇ ಹೊರತು, ಶೆಟ್ಟರ್ ಮತ್ತು ಕೇಂದ್ರದ ನಡುವಣ ಚುನಾವಣೆಯಲ್ಲ. ಬಿಜೆಪಿಯವರು ಪಕ್ಷ ಮುಖ್ಯ ಎನ್ನುತ್ತಾರೆ. ಆದರೆ ಪಕ್ಷಕ್ಕೆ ವ್ಯಕ್ತಿಯೂ ಅಷ್ಟೇ ಮುಖ್ಯ. ಹಾಗಾದರೆ ಪ್ರಧಾನಿ ಮೋದಿ ಅವರ ಭಾವಚಿತ್ರ ಇಟ್ಟುಕೊಂಡು ಯಾಕೆ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು. ಈ ಚುನಾವಣೆಯಲ್ಲಿ ಒಳ ಹೊಡೆತ ಮತ್ತು ಹೊರ ಹೊಡೆತ ಭಾರಿ ಕೆಲಸ ಮಾಡಲಿದೆ. ಫಲಿತಾಂಶದ ದಿನ ಅದರ ಪರಿಣಾಮ ಗೊತ್ತಾಗಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.