ಹುಬ್ಬಳ್ಳಿ:ಇದೇ ಮೊದಲ ಬಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಈ ತರಹದ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಕಿಮ್ಸ್ನ ನಿರ್ದೇಶಕರಾದ ಡಾ.ರಾಮಲಿಂಗಪ್ಪ ಅಂತರಥಾನಿ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೇರೆ ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ತರಹದ ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯನ್ನು ಕೈಗೊಂಡಿದ್ದು, ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದರು.
ಈ ಶಸ್ತ್ರ ಚಿಕಿತ್ಸೆಯನ್ನು ನಿರಂತರ 3 ಗಂಟೆಗಳ ಕಾಲ ನಡೆಸಲಾಗಿದೆ, ಈಗ ರೋಗಿ ಆರೋಗ್ಯವಾಗಿದ್ದು, ಶಸ್ತ್ರ ಚಿಕಿತ್ಸೆಯಾದ 42 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದಾರೆ. ಇಂದಿನ ವೈದ್ಯಕೀಯ ಬೆಳವಣಿಗೆಯಿಂದಾಗಿ ಈ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಯಿತು. 2.70 ಲಕ್ಷ ರೂ. ವೆಚ್ಚದಲ್ಲಿ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಚಿಕಿತ್ಸೆಗೆ ರೂ. 3.90 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದರು.
ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟೇಶ ಮೊಗೆರ, ಡಾ. ಮಲಗೌಡ ಪಾಟೀಲ, ಡಾ.ವಿವೇಕ ಗಾಣಿಗೇರ, ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರವಿರಾಜ ರಾಯ್ಕರ, ಡಾ. ಜೈದೀಪ್ ರಟಕಲ್, ಡಾ. ಮಂಜುಪ್ರಸಾದ ಜಿ.ಬಿ, ಡಾ.ಸಂಪತ್ತಕುಮಾರ ಎನ್.ಜಿ., ಡಾ. ಚೇತನ್ ಹೊಸಕಟ್ಟಿ, ಅರಿವಳಿಕೆ ವಿಭಾಗದ ಡಾ.ಮಾಧುರಿ ಕುರಡಿ, ಡಾ. ಶೀತಲ್ ಹಿರೇಗೌಡರ, ಡಾ.ರೂಪ, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ ರೆಡ್ಡಿ ಮತ್ತು ಶಿವಾನಂದ ಹೊನಕೇರಿ ಅವರನ್ನೊಳಗೊಂಡ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದರು.