ಹುಬ್ಬಳ್ಳಿ:ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಹಳೇಹುಬ್ಬಳ್ಳಿಯ ನೇಕಾರ ನಗರದಲ್ಲಿ ಭಾನುವಾರ ನಡೆದಿದೆ. ನಾಗರಾಜ ಚಲವಾದಿ ಎಂಬಾತ ಕೊಲೆಗೀಡಾದ ಯುವಕ. ಹುಬ್ಬಳ್ಳಿಯ ನೇಕಾರ ನಗರದ ಸಂತೋಷ ಕಾಲೊನಿಯಲ್ಲಿ ಆಟೋದಲ್ಲಿ ಬಂದಿದ್ದ ನಾಲ್ಕೈದು ಜನರ ಗುಂಪೊಂದು ನಾಗರಾಜ ಚಲವಾದಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ನಾಗರಾಜ ಮೃತಪಟ್ಟಿದ್ದಾನೆ.
ನಾಗರಾಜನ ಜತೆ ಇದ್ದವನ ಮೇಲೂ ಹಲ್ಲೆಗೆ ಯತ್ನ: ನಾಗರಾಜ ಜೊತೆ ಇದ್ದ ಇನ್ನೊಬ್ಬನ ಮೇಲೆ ಕೂಡಾ ಹಲ್ಲೆಗೆ ಮುಂದಾದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನಿಖಿಲ್, ಪ್ರದೀಪ್ ಶಶಿ ಎಂಬುವವರು ಆಟೋದಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಆಸ್ತಿ ವಿಚಾರ ಹಾಗೂ ಹಳೇ ವೈಷಮ್ಯ ಘಟನೆಗೆ ಕಾರಣವಿರಬಹುದು ಎಂದು ಮೃತ ನಾಗರಾಜ ಸ್ನೇಹಿತ ಕೃಷ್ಣ ಮಾಹಿತಿ ನೀಡಿದ್ದಾರೆ.
ದಾಳಿ ನಡೆಸಿದಾಗ ನಾನು ನಾಗರಾಜ ಜೊತೆ ಇದ್ದೆ. ಆದ್ರೆ ನನ್ನ ಮೇಲೂ ದಾಳಿ ಮಾಡಲು ಯತ್ನಿಸಿದರು. ಆಗ ನಾನು ಅವರಿಂದ ತಪ್ಪಿಸಿಕೊಂಡೆ. ದಾಳಿ ಮಾಡಿದವರ ಉದ್ದೇಶ ನಾಗರಾಜ ಕೊಲೆ ಮಾಡುವುದಾಗಿತ್ತು. ಕೊಲೆ ಬಗ್ಗೆ ತನಿಖೆ ನಡೆಸಬೇಕು. ಯಾರು ಕೊಲೆ ಮಾಡಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು: ಹಾಡಹಗಲೇ ನಾಗರಾಜ ಎಂಬ ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ. ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.