ಹುಬ್ಬಳ್ಳಿ:ಗೌರಿ ಗಣೇಶ ಹಬ್ಬದ ನಿಮಿತ್ತ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಿಂದ 100 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
100 ಹೆಚ್ಚುವರಿ ಬಸ್ಗಳ ವ್ಯವಸ್ಥೆ
ಹುಬ್ಬಳ್ಳಿ ವಿಭಾಗದಲ್ಲಿ ನಿತ್ಯ 365 ರಿಂದ 375 ಬಸ್ಗಳು ಸಂಚರಿಸುತ್ತಿವೆ. ಗೌರಿ ಗಣೇಶ ಹಬ್ಬದ ಅವಧಿಯಲ್ಲಿ ಜಿಲ್ಲೆಯೊಳಗೆ ಹಾಗೂ ಮುಂಬೈ, ಪುಣೆ, ಗೋವಾ, ಬೆಂಗಳೂರು ಮತ್ತಿತರ ಸ್ಥಳಗಳಿಂದ ನಗರಕ್ಕೆ ಮತ್ತು ಜಿಲ್ಲೆಯ ವಿವಿಧ ಸ್ಥಳಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜನರ ಓಡಾಟ ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ನಿತ್ಯದ ಬಸ್ಗಳೊಂದಿಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ 100 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ವೋಲ್ವೊ, ಸ್ಲೀಪರ್, ರಾಜಹಂಸ, ವೇಗದೂತ ಸೇರಿದಂತೆ ಎಲ್ಲ ಬಗೆಯ ಬಸ್ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ.
ಹಬ್ಬಕ್ಕಾಗಿ ಜಿಲ್ಲೆಗೆ ಬರುವವರ ಅನುಕೂಲಕ್ಕಾಗಿ ಬೆಂಗಳೂರು, ಮುಂಬೈ, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಹುಬ್ಬಳ್ಳಿಗೆ ಸೆ.8 ರಂದು ಬುಧವಾರ 20 ಹಾಗೂ 9ರಂದು ಗುರುವಾರ 30 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ, ಹಬ್ಬ ಮುಗಿಸಿ ಹಿಂದಿರುಗಲು ಹುಬ್ಬಳ್ಳಿಯಿಂದ ಸೆ.12 ಹಾಗೂ 13ರಂದು 20 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.