ಹುಬ್ಬಳ್ಳಿ: ರಾಜ್ಯದ ಎರಡು ಸ್ಮಾರ್ಟ್ ಸಿಟಿಗಳಾದ ಹುಬ್ಬಳ್ಳಿ ಮತ್ತು ದಾವಣಗೆರೆ ನಡುವೆ ನಿಯಮಿತವಾಗಿ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಮತ್ತಷ್ಟು ಶೀಘ್ರ, ಆರಾಮದಾಯಕ ಪ್ರಯಾಣದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಎಸಿ ಬಸ್ ಸಂಚಾರವನ್ನು ಸೋಮವಾರದಿಂದ ಆರಂಭಿಸಲಾಗುತ್ತದೆ ಈ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಾರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಈ ಮೊದಲು ಹುಬ್ಬಳ್ಳಿಯಿಂದ ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ ನಡುವೆ ತಡೆರಹಿತ ವೇಗದೂತ ಬಸ್ಸುಗಳು ಸಂಚರಿಸುತ್ತಿದ್ದವು. ಸಾರ್ವಜನಿಕರ ಬೇಡಿಕೆಯ ಮೇರೆಗೆ ಇತ್ತೀಚೆಗೆ ಹುಬ್ಬಳ್ಳಿಯಿಂದ ಹಾವೇರಿ ಮತ್ತು ರಾಣೆಬೆನ್ನೂರಿಗೆ ತಡೆರಹಿತ ವೇಗದೂತ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಸಧ್ಯ ಹುಬ್ಬಳ್ಳಿ- ಬೆಳಗಾವಿ ನಡುವೆ ಮಾತ್ರ ವೋಲ್ವೋ ಎಸಿ ಬಸ್ ಗಳು ಸಂಚರಿಸುತ್ತಿವೆ. ಈ ಬಸ್ಸುಗಳು ಮಾರ್ಗ ಮಧ್ಯದ ಊರುಗಳ ಒಳಗೆ ಹೋಗದೆ, ನೇರವಾಗಿ ಬೈಪಾಸ್ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಪ್ರಯಾಣದ ಅವಧಿಯಲ್ಲಿ ಸಾಕಷ್ಟು ಉಳಿತಾಯವಾಗುತ್ತದೆ.