ಹುಬ್ಬಳ್ಳಿ: ನಗರದ ಪಿ.ಬಿ. ರಸ್ತೆ ಬಂಕಾಪುರ ಚೌಕ ಬಳಿ ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಬಿಹಾರ ಮೂಲದ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟೆ ಪೊಲೀಸರು ನಗರದ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಬಿಹಾರ ಮೂಲದ ಕಾರ್ಮಿಕರು ಪ್ರಕರಣದಲ್ಲಿ ಬಿಡನಾಳದ ಅಹಮ್ಮದಸಾಬ್ ಎಸ್. ನದಾಫ್, ನಾಗರಾಜ ಎಸ್ ಪಾಟೀಲ್, ಲಕ್ಷ್ಮೀ ನಗರದ ಇಮಾಮಸಾಬ ಎಂ ಮೊರಬ, ವೀರಾಪುರ ಓಣಿ ಕರೆಮ್ಮನ ಗುಡಿ ಭೀಮ. ಸಿ. ಬಿ. ಮಡಿವಾಳರ, ಸೋನಿಯಾ ಗಾಂಧಿನಗರದ ರಾಮನಗೌಡ ಕೋಟಿಗೌಡ್ರ, ಶಶಿಧರ ಬಡಿಗೇರ, ಮಂಜುನಾಥ ಎಂತ್ಲಿ, ಜೋಳದ ಓಣಿ ತುಳಜಾ ಭವಾನಿ ಗುಡಿಯ ವಿಜಯ ಹಿರೇಮಠ ಬಂಧಿತ ಆರೋಪಿಗಳು. ಇವರ ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಐವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸ ವರ್ಷದ ವೇಳೆ ಕ್ಷುಲ್ಲಕ ಕಾರಣಕ್ಕೆ ಏಟು ತಿಂದ ಪರರಾಜ್ಯದ ಯುವಕರು.. ಸ್ಥಳೀಯ ಹುಡುಗರಿಂದ ಪುಂಡಾಟ ಆರೋಪ
ಏನಿದು ಘಟನೆ: ಮಂಗಳವಾರ ಮಧ್ಯರಾತ್ರಿ ಬಂಕಾಪುರಚೌಕ ಬಳಿಯ ಕಂಪೌಂಡ್ ಆವರಣದಲ್ಲಿ ಬಿಹಾರ ಮೂಲದ ಅನಿಲಕುಮಾರ ಸುರೇಶ ಸಿಂಗ್ ಹಾಗೂ ಆತನ ಗೆಳೆಯರು ಹೊಸ ವರ್ಷದ ಆಚರಣೆ ಮಾಡಿ ಮೂತ್ರ ವಿಸರ್ಜನೆಗೆಂದು ತೆರಳಿದ್ದರು. ಆಗ ಅಲ್ಲಿದ್ದ 4-5 ಜನರ ಗುಂಪು ಇಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಅವಾಚ್ಯವಾಗಿ ನಿಂದಿಸಿದ್ದರು ಎನ್ನಲಾಗ್ತಿದೆ. ಈ ವೇಳೆ ಅನಿಲಕುಮಾರ್ ಕೂಡ ಅವರಿಗೆ ಮತ್ತೆ ಅವಾಚ್ಯ ಪದಗಳಿಂದ ನಿಂದಿಸಿದ್ದನಂತೆ. ಇದರಿಂದ ಕೋಪಕೊಂಡ 12-14 ಜನರ ಗುಂಪು ಆತನ ಮೇಲೆ ಹಲ್ಲೆ ಮಾಡಿತ್ತು. ಆಗ ಅನಿಲನ ಸ್ನೇಹಿತರು ಬಿಡಿಸಲು ಬಂದಾಗ ಎರಡು ಗುಂಪಿನ ಸದಸ್ಯರ ನಡುವೆ ಹೊಡೆದಾಟವಾಗಿತ್ತು. ಈ ವೇಳೆ ಅನಿಲನಿಗೆ ಲೋಹದ ಪಾತ್ರೆಯಿಂದ ಬಲವಾಗಿ ತಲೆಗೆ ಹೊಡೆದುದ್ದಲ್ಲದೇ, ಅವನ ಸ್ನೇಹಿತರಾದ ರಾಜನಗೌಡ, ಬಿಜಿಲಾಲಗೂ ಬಲವಾಗಿ ಹೊಡೆದು ಗಾಯಗೊಳಿಸಿದ್ದರು. ಅಲ್ಲದೆ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರಂತೆ.
ಈ ಕುರಿತು ಕಸಬಾಪೇಟೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆಯುಕ್ತರು ಹಲ್ಲೆಕೋರರ ಪತ್ತೆಗೆ ತಂಡ ರಚಿಸಿದ್ದರು. ಈ ತಂಡದ ಪೊಲೀಸರು 8 ಜನರನ್ನು ಬಂಧಿಸಿ, ಐವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.