ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಶ್ರಮವಹಿಸುತ್ತಿರುವ ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಮತ್ತೊಂದು ಸೌಲಭ್ಯವನ್ನು ಒಳಗೊಂಡಿದೆ. ಬರೋಬ್ಬರಿ 2 ಸಾವಿರ ಜನರಿಗೆ ಆಕ್ಸಿಜನ್ ಪೂರೈಕೆ ಮಾಡುವಷ್ಟು ಸಾಮರ್ಥ್ಯವನ್ನು ಈ ಆಸ್ಪತ್ರೆ ಹೊಂದಿದೆ.
ಕಿಮ್ಸ್ ಇದೀಗ ತಲಾ 20 ಕೆಎಲ್ ಸಾಮರ್ಥ್ಯದ 2 ಘಟಕ ಹೊಂದಿದೆ. ಮೊದಲು 20 ಕೆಎಲ್ ಸಾಮರ್ಥ್ಯದ ಘಟಕ ಸ್ಥಾಪಿಸಲಾಗಿತ್ತು. ಈಗ ಮತ್ತೊಂದು 20 ಕೆಎಲ್ ಲಿಕ್ವಿಡ್ ಆಕ್ಸಿಜನ್ ಘಟಕಕ್ಕೆ ಚಾಲನೆ ಸಿಕ್ಕಿದೆ. ಗೋಡೆಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಅದರ ಮೂಲಕ ರೋಗಿಗಳಿಗೆ ನೀರಿನಂತೆ ಆಕ್ಸಿಜನ್ ಪೂರೈಕೆಯಾಗುತ್ತಿದೆ.
ಮೊದಲು 20 ಕೆಎಲ್ ಲಿಕ್ವಿಡ್ ಆಮ್ಲಜನಕ ಪೂರೈಕೆಯ ಜವಾಬ್ದಾರಿಯನ್ನು ಪ್ರಾಕ್ಸೇರ್ ಕಂಪನಿಗೆ ನೀಡಲಾಗಿತ್ತು. ಈಗ ಮತ್ತೆ ಅದೇ ಕಂಪನಿಗೆ ಈ ಜವಾಬ್ದಾರಿ ನೀಡಲಾಗಿದೆ. ಆದರೆ, ಲಿಕ್ವಿಡ್ ಮಾತ್ರ ಪೂರೈಕೆ ಮಾಡಬೇಕೆಂಬ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಘಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಅನುದಾನದಲ್ಲಿ 40 ಲಕ್ಷ ರೂ. ಖರ್ಚು ಮಾಡಲಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆಪರೇಷನ್ ಥಿಯೇಟರ್, ಐಸಿಯು, ತುರ್ತು ಚಿಕಿತ್ಸಾ ಘಟಕ, ಕಾರ್ಡಿಯಾಲಜಿ, ತಾಯಿ ಮತ್ತು ಮಗುವಿನ ಚಿಕಿತ್ಸಾ ಘಟಕ ಸೇರಿ ವಿವಿಧ ವಿಭಾಗಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ. ಲಿಕ್ವಿಡ್ ಆಕ್ಸಿಜನ್ ಪೈಪ್‌ಲೈನ್ ಮೂಲಕ ಪೂರೈಕೆ ಮಾಡಲಾಗುತ್ತಿದೆ.