ಹುಬ್ಬಳ್ಳಿ :ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡುವಲ್ಲಿ ವಿಳಂಬ ಮಾಡುತ್ತಿದ್ದು ಬಿಜೆಪಿಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಬರೆದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದಾರೆ.
ಪಾಲಿಕೆ ಬಿಜೆಪಿ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಿಗಿ, ಸೀಮಾ ಮುಗಲಿಶೆಟ್ಟರ್, ಸಂತೋಷ ಚೌಹಾಣ್, ಮಹದೇವಪ್ಪ ನರಗುಂದ, ಬೀರಪ್ಪ ಖಂಡೇಕರ, ಉಮಾ ಮುಕುಂದ, ವೀರಣ್ಣ ಸವಡಿ, ರೂಪಾ ಶೆಟ್ಟಿ, ಕಿಶನ್ ಬೆಳಗಾವಿ, ವೀಣಾ ಬರದ್ವಾಡ, ಸರಸ್ವತಿ ಧೋಂಗಡಿ, ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ಮೀನಾಕ್ಷಿ ವಂಟಮೂರಿ ರಾಜೀನಾಮೆ ಸಲ್ಲಿಸಿದ್ದಾರೆ.
ನನಗೆ ಟಿಕೆಟ್ ಪಕ್ಕಾ- ಜಗದೀಶ್ ಶೆಟ್ಟರ್: ನನಗೆ ಎರಡು ದಿನಗಳಲ್ಲಿ ಟಿಕೆಟ್ ಸಿಗಲಿದೆ. ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ನನ್ನ ಮಗನ ಹೆಸರು ಕೂಡಾ ಹೇಳಿಲ್ಲ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಜೊತೆ ಟಿಕೆಟ್ ಬಗ್ಗೆ ಸುದೀರ್ಘ ಮೀಟಿಂಗ್ ಕೂಡಾ ಆಗಿದೆ. ಓಪನ್ ಆಗಿ ಎಲ್ಲವನ್ನೂ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿನ್ನೆ (ಗುರುವಾರ) ತಿಳಿಸಿದ್ದರು.