ಹುಬ್ಬಳ್ಳಿ:ರಾಜ್ಯದಲ್ಲಿ ಕಟ್ಟಡ ನಿರ್ಮಾತೃಗಳಿಂದ 8,000 ಕೋಟಿ ಕಟ್ಟಡ ಕಾರ್ಮಿಕರ ಉಪಕರ ಸಂಗ್ರಹವಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಡಳಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ನಿಧಿ ಬಳಕೆ ಮಾಡಲಾಗುವುದು ಎಂದು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ಹೋಟೆಲ್ ಕ್ಲಾರ್ಕ್ ಇನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿರ್ಮಾತೃಗಳು ಹಾಗೂ ಗುತ್ತಿಗೆದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ಕಾರ್ಮಿಕ ಉಪಕರ ಸಂಗ್ರಹವಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಂಗ್ರಹವಾದ ಉಪಕರವನ್ನು ಕಾರ್ಮಿಕ ಕಲ್ಯಾಣ ಯೋಜನೆಗಳಿಗೆ ಬಳಸಲಾಗುವುದು. ರಾಜ್ಯದಲ್ಲಿ 20 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ಇದುವರೆಗೂ ಮಂಡಳಿಯಿಂದ 500 ಕೋಟಿ ರೂಪಾಯಿಗಳನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗಿದೆ. ರಾಜ್ಯಾದ್ಯಂತ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಡಳಿಯ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯಿಲ್ಲ. ಬಹುತೇಕ ಅಸಂಘಟಿತ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ನಿರ್ಮಾತೃಗಳು ಹಾಗೂ ಗುತ್ತಿಗೆದಾರರು ತಮ್ಮ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ತಪ್ಪದೇ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ 21,19,399 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಒಂದು ವರ್ಷದಲ್ಲಿ 90 ದಿನಗಳ ಕಾಲ ಕಟ್ಟಡ ಕಾರ್ಮಿಕ ಕೆಲಸದಲ್ಲಿ ತೊಡಗಿರುವವರು ಸೇವಾ ಸಿಂಧೂ ಅಂತರ್ಜಾಲ ಪುಟದ ಮೂಲಕ, ಫಾರಂ 05 ರಡಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಒಮ್ಮೆ ನೋಂದಣಿ ಮಾಡಿದರೆ 3 ವರ್ಷಗಳ ಕಾಲ ನೋಂದಣಿ ಅಸ್ತಿತ್ವದಲ್ಲಿ ಇರುತ್ತದೆ. ನಂತರ ನೋಂದಣಿ ನವೀಕರಿಸಬೇಕು. ಮಂಡಳಿಯ ಕೆಲವು ನಿಯಮಾವಳಿಗೆ ತಿದ್ದುಪಡಿ ತರಲಾಗಿದ್ದು, ಕಾರ್ಮಿಕರು ನಿರ್ಮಾಣ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂಪಾಯಿಗಳ ಪರಿಹಾರ ಧನ ವಿತರಿಸಲಾಗುವುದು. ಮಂಡಳಿಯಲ್ಲಿ ಶೈಕ್ಷಣಿಕ, ಮದುವೆ ಅಂತ್ಯ ಸಂಸ್ಕಾರ, ವೈದ್ಯಕೀಯ, ಅಪಘಾತ, ಹೆರಿಗೆ, ಉಪಕರಣ ಖರೀದಿ ಸಾಲ, ಪಿಂಚಣಿ, ಅನಿಲ ಭಾಗ್ಯ, ಸೇರಿದಂತೆ 15 ಸಾಮಾಜಿಕ ಕಲ್ಯಾಣ ಹಾಗೂ ಭದ್ರತಾ ಯೋಜನೆಗಳಿವೆ ಎಂದು ಮಾಹಿತಿ ಎಂದರು.