ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆ ಪುನಾರಂಭ: ಕೇಂದ್ರ ಸಚಿವ ಜೋಶಿ ಮಾಹಿತಿ - ಈಟಿವಿ ಭಾರತ ಕರ್ನಾಟಕ

Hubballi-Bengaluru superfast express: ಹುಬ್ಬಳ್ಳಿ - ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ರೈಲು ಸೇವೆಯನ್ನು ನ.30 ರಿಂದ ಮತ್ತೆ ಆರಂಭಿಸಲಾಗುತ್ತಿದೆ.

hubballi-bengaluru-superfast-express-train-service-resumes
ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆ ಪುನರಾರಂಭ:

By ETV Bharat Karnataka Team

Published : Nov 26, 2023, 7:46 PM IST

ಹುಬ್ಬಳ್ಳಿ:ಹುಬ್ಬಳ್ಳಿ -ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಿಶೇಷ ಸೂಪರ್​ಫಾಸ್ಟ್ ರೈಲು ಸೇವೆಯನ್ನು ಪುನಾರಂಭಿಸಲಾಗಿದೆ. ರೈಲ್ವೆ ಇಲಾಖೆ ಕಳೆದ ವಾರ ಈ ರೈಲು ಸೇವೆಯನ್ನು ರದ್ದು ಮಾಡಿತ್ತು. ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ರೈಲು ಸೇವೆಯನ್ನು ಪುನಾರಂಭಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಅವರಿಗೆ ಸಾರ್ವಜನಿಕರು ಮತ್ತು ಹಲವು ಸಂಘಟನೆಗಳು ಮನವಿ ಮಾಡಿದ್ದವು.

ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07339/07340) ವಿಶೇಷ ರೈಲು ಸೇವೆ ಪುನರಾರಂಭವಾಗಿದೆ. ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಪುನರಾರಂಭ ಮಾಡುವ ಕುರಿತು ನಾನು ರಾಜಸ್ಥಾನದಿಂದ ಬಂದ ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಪ್ರಸ್ತಾವಿಸಿದ್ದೆ. ಅದರಂತೆ ನನ್ನ ಪ್ರಸ್ತಾವನೆಯನ್ನು ಪರಿಗಣಿಸಿ ತಕ್ಷಣವೇ ರೈಲು ಸೇವೆ ಆರಂಭಿಸಿ ಆದೇಶ ಹೊರಡಿಸಿದ ರೈಲ್ವೆ ಅಧಿಕಾರಿಗಳಿಗೆ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್​ ಅವರಿಗೆ ಧನ್ಯವಾದಗಳು. ಎಕ್ಸ್‌ಪ್ರೆಸ್ ರೈಲು ಈ ಹಿಂದೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು ಮತ್ತು ಅದರ ಸೇವೆಗಳ ಪುನರಾರಂಭ ಮಾಡಿರುವುದು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ನವೆಂಬರ್ 30ರಿಂದ ಮತ್ತೆ 07339/40 ಹುಬ್ಬಳ್ಳಿ - ಬೆಂಗಳೂರು ನಡುವೆ ಸೂಪರ್‌ಫಾಸ್ಟ್ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಸೇವೆಯನ್ನು ನವೆಂಬರ್ 30ರಿಂದ 2024ರ ಫೆಬ್ರವರಿ 29ರವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ.

ಇದನ್ನೂ ಓದಿ:ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ

ವಂದೇ ಭಾರತ್ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ:ಬೆಂಗಳೂರು-ಧಾರವಾಡ ಮಧ್ಯೆ ಕಡಿಮೆ ಸಮಯದಲ್ಲಿ ಪ್ರಯಾಣ ಬೆಳೆಸಲು ವಂದೇ ಭಾರತ್ ರೈಲು ಆರಂಭಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಜೂನ್ 28 ರಂದು ಚಾಲನೆ ನೀಡಿದ್ದರು. ಕರ್ನಾಟಕದ 2ನೇ ವಂದೇ ಭಾರತ್ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿಯ ನಡುವೆ ಒಂದೇ ಬಾರಿ ಈ ರೈಲು ಸಂಚಾರ ನಡೆಸುತ್ತಿದ್ದು, 8 ಬೋಗಿಗಳನ್ನು ಹೊಂದಿದೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಈ ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ABOUT THE AUTHOR

...view details