ಹುಬ್ಬಳ್ಳಿ: ಹುಟ್ಟುಹಬ್ಬ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಸಂಬಂಧಿಕರು ಏನಾದರೂ ಗಿಫ್ಟ್ ಕೊಟ್ಟು ಶುಭಾಶಯ ತಿಳಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪರಿಸರ ಪ್ರೇಮಿ ಯಾವುದೇ ಶುಭ ಸಮಾರಂಭಗಳಿದ್ದರೂ ಹಾಜರಾಗಿ ಸಸಿ ನೀಡುವ ಮೂಲಕ ಆ ಕ್ಷಣಗಳನ್ನು ಅವಿಸ್ಮರಣೀಯ ಮಾಡುವ ರೀತಿ ಕೆಲಸ ಮಾಡುತ್ತಿದ್ದಾರೆ.
ಜನ್ಮದಿನ, ಉಪನಯನ, ಮದುವೆ, ಮನೆವಾಸ್ತು, ನಿವೃತ್ತಿ, ವಿಶೇಷ ಸಾಧನೆ, ಪ್ರಶಸ್ತಿ, ಪುರಸ್ಕಾರ ಪಡೆದಾಗ ಹೀಗೆ ವಿಭಿನ್ನ ಸಂದರ್ಭಗಳಲ್ಲಿ ಸಸಿಯೊಂದನ್ನು ನೀಡಿ ಅಭಿನಂದಿಸುವ ಅಪರೂಪದ ಹವ್ಯಾಸ ರೂಢಿಸಿಕೊಂಡಿರುವರ ಇವರ ಹೆಸರು ಬಾಲಚಂದ್ರ ಡಂಗನವರ. ಪರಿಸರಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಯೋಚಿಸಿದ ಅವರು 'ಗ್ರೋ ಗ್ರೀನ್ ಪೆಡಲರ್ಸ್' ಎನ್ನುವ ಸಮಾನ ಮನಸ್ಕ ಯುವಕರ ತಂಡ ಕಟ್ಟಿಕೊಂಡು ಪರಿಸರ ಕಾಳಜಿ ತೋರುತ್ತಿದ್ದಾರೆ.
ಪರಿಚಿತರೋ, ಅಪರಿಚಿತರೋ ಅವರ ಹುಟ್ಟಿದ ದಿನಾಂಕ ತಿಳಿದುಕೊಂಡು ಅವರಿಗೆ ಸಸಿಕೊಟ್ಟು ಶುಭಕೋರುವುದು ಈ ತಂಡದ ವಿಶೇಷತೆಯಾಗಿದೆ. ನಂತರ ಸೆಲ್ಪಿ ಕ್ಲಿಕಿಸಿಕೊಂಡು ಫೆಸ್ ಬುಕ್ನಲ್ಲಿ ಹಾಕುತ್ತಾರೆ. ಅದರಿಂದ ಸಸಿ ಪಡೆದವರನ್ನು ಪ್ರೇರಣೆಗೊಳಿಸುತ್ತಾರೆ. ಇವರ ಈ ಕಾರ್ಯಕ್ಕೆ ಹಲವರು ಸಾಥ್ ನೀಡುತ್ತಿದ್ದಾರೆ. ಪ್ರತಿ ತಿಂಗಳೂ ಇವರ ತಂಡದಿಂದ ಒಂದು ಸರ್ಕಾರಿ ಶಾಲೆಗೆ ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಅಲ್ಲದೇ ಮಕ್ಕಳಿಗೆ ಉಚಿತ ನೋಟ್‌ಬುಕ್ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಸಾಬೂನು ಕೂಡಾ ಕೊಡುವುದನ್ನು ಆರಂಭಿಸಿದ್ದಾರೆ.
'ಗ್ರೋ ಗ್ರೀನ್ ಪೆಡಲರ್ಸ್' ತಂಡ ಇವರಿಗೆ ಯಾವುದೇ ಧರ್ಮ, ಜಾತಿ, ಮೇಲು,ಕೀಳು, ಪಕ್ಷ, ಭೇದವಿಲ್ಲ. ಶ್ರೀಮಂತನಿಂದ ಹಿಡಿದು, ಉದ್ಯಮಿ, ಸಾಹಸಿ, ಕ್ರೀಡಾಪಟು, ರಾಜಕಾರಣಿ, ಪೌರಕಾರ್ಮಿಕ, ಆಟೋ ಚಾಲಕ ಸೇರಿದಂತೆ ಎಲ್ಲರನ್ನು ಒಂದೇ ರೀತಿ ಗೌರವದಿಂದ ಕಾಣುತ್ತಾರೆ. ಹೀಗೆ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನಪರಿಷತ್ ಸಚಿವ ಬಸವರಾಜ ಹೊರಟ್ಟಿ, ಬಾಬಾರಾಮದೇವ್ಗೂ ಸೇರಿದಂತೆ ನಾಲ್ಕು ವರ್ಷದಲ್ಲಿ ಸುಮಾರು 4000 ಕ್ಕೂ ಹೆಚ್ಚು ಸಸಿಗಳನ್ನು ನೀಡಿದ್ದಾರೆ.