ಹುಬ್ಬಳ್ಳಿ:ಲಾಕ್ಡೌನ್ ಜಾರಿಯಾದ ಮೇಲೆ ಎಲ್ಲ ಕ್ಷೇತ್ರಗಳಲ್ಲೂ ಅಪರಿಮಿತವಾದ ಬದಲಾವಣೆಗಳಾಗಿವೆ. ಶಿಕ್ಷಣ ಕ್ಷೇತ್ರದಲ್ಲೂ ಕೂಡಾ ಅನಿವಾರ್ಯ ಅನ್ನಿಸುವಂತಹ ಕೆಲವೊಂದು ಬದಲಾವಣೆಗಳು ಜರುಗುತ್ತಿವೆ.
ಆನ್ಲೈನ್ ಶಿಕ್ಷಣಕ್ಕೆ ಶಾಲೆಗಳು ಮಾರುಹೋಗುತ್ತಿವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಆನ್ಲೈನ್ ಶಿಕ್ಷಣ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಇಲ್ಲೊಂದು ಸರ್ಕಾರಿ ಶಾಲೆ ಕೂಡ ಯಶಸ್ವಿಯಾಗಿ ಆನ್ಲೈನ್ ಶಿಕ್ಷಣ ನಡೆಸುತ್ತಿದೆ. ಆ ಶಾಲೆ ಇರೋದು ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ.
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಮಕ್ಕಳಿಗೆ ಗೊತ್ತಿಲ್ಲದ ವಿಷಯಗಳನ್ನು ವಿಡಿಯೋ ಮಾಡಿ ಕಳಿಸಿ ಅವರ ಸಮಸ್ಯೆ ಬಗೆಹರಿಸುತ್ತಾರೆ.
ವಾರಕ್ಕೊಮ್ಮೆ ಶಿಕ್ಷಕರು ಶಾಲೆಗೆ ಬಂದು ಮಾಡಿದ ಎಲ್ಲಾ ಪಠ್ಯ ಚಟುವಟಿಕೆಗಳನ್ನು ಪರಿಶೀಲಿಸುತ್ತಾರೆ. ಮಕ್ಕಳೂ ಕೂಡಾ ಆನ್ಲೈನ್ ಕಲಿತ ಪಾಠಗಳನ್ನು ಒಪ್ಪಿಸುತ್ತಾರೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಶಾಲೆಗಳು ನಡೆಯುತ್ತವೆ. ಇದರಿಂದ ತುಂಬಾ ಉಪಯೋಗವಾಗಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.
ಈ ಮಕ್ಕಳು ಬಸ್ ಹಾಗು ರೈಲು ಮಾದರಿಯ ಕೋಣೆಗಳಲ್ಲಿ ಓದುತ್ತಾರೆ ಎಂಬುದು ಮತ್ತೊಂದು ವಿಶೇಷ. ಒಟ್ಟಿನಲ್ಲಿ ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರ ಮಧ್ಯೆ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬುದನ್ನು ಈ ಶಾಲೆ ಸಾಬೀತುಪಡಿಸುತ್ತಿದೆ.