ಈದ್ಗಾ ಮೈದಾನದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹುಬ್ಬಳ್ಳಿ:ಅದ್ದೂರಿ ಮೆರವಣಿಗೆಯ ಮೂಲಕ ಸಾಗಿ ಬಂದು ಇಂದು ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಗರದ ಮೂರುಸಾವಿರ ಮಠದ ಆವರಣದಿಂದ ಆರಂಭವಾದ ಮೆರವಣಿಗೆ ಮಹಾವೀರಗಲ್ಲಿ, ತುಳಜಾಭವಾನಿ ವೃತ್ತ, ದಾಜೀಬಾನ್ ಪೇಟೆ, ಅಂಚಟಗೇರಿ ಓಣಿ, ರಾಯಣ್ಣ ವೃತ್ತ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿತು.
ಮೆರವಣಿಗೆಯುದ್ದಕ್ಕೂ ಪಂಚವಾದ್ಯ, ಡೋಲು, ನಾಶಿಕ್ ಜಾಂಝ್ ಮೇಳ ಕಂಡುಬಂತು. ಶಾಸಕ ಅರವಿಂದ ಬೆಲ್ಲದ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಭಾರತ ಮಾತೆಯ ಆಳೆತ್ತರದ ಭಾವಚಿತ್ರ, ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸಿದವು. ಬಿಜೆಪಿ, ಆರ್‌ಎಸ್ಎಸ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ವಿಎಚ್‌ಪಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆ ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಡಿಸಿಪಿ ರಾಜೀವ್ ಎಂ. ನೇತೃತ್ವ ವಹಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ, ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಈದ್ಗಾ ಮೈದಾನದಲ್ಲಿ ಗಣಪತಿ ವಿರಾಜಮಾನ:ಸಾಕಷ್ಟು ವಿರೋಧದ ನಡುವೆ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಹಿಂದೂಪರ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೂರು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸದ್ಯ ಮೈದಾನದ ಸುತ್ತಮುತ್ತ ಹು-ಧಾ ಪೊಲೀಸ್ ಕಮೀಷನರೇಟ್‌ನಿಂದ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಅವಳಿನಗರದಲ್ಲಿ ಪಾಲಿಕೆಯಡಿ 1500 ಹಾಗೂ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 500 ಸೇರಿ ಒಟ್ಟು 2000 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗಣೇಶೋತ್ಸವ ಮುಗಿಯುವವರೆಗೆ ಹೆಚ್ಚಿನ ಭದ್ರತೆಗಾಗಿ ಐದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಈದ್ಗಾ ಮೈದಾನದಲ್ಲಿ ಶುದ್ಧಿ, ಹಂದರಗಂಬ ಹಾಗೂ ಕೇಸರಿ ಭಗವಾಧ್ವಜ ಪೂಜೆ ಬಳಿಕ ಗಣೇಶನ ಮಂಟಪ ನಿರ್ಮಾಣ ಕಾರ್ಯ ಜರುಗಿತು. ಪೂಜಾ ಕಾರ್ಯಕ್ರಮದಲ್ಲಿ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯ ಅಧ್ಯಕ್ಷ ಸಂಜೀವ್ ಬಡಸ್ಕರ್, ಹಿಂದೂಪರ ಸಂಘಟನೆಗಳ ಮುಖಂಡರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯದ ಜನರ ಆಶೋತ್ತರದಂತೆ ಹು-ಧಾ ಪ್ರತಿಷ್ಠಿತ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ವಿಜೃಂಭಣೆಯಿಂದ ಪೂಜಾ ಕೈಂಕರ್ಯಗಳೊಂದಿಗೆ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ. ಕಳೆದ ಬಾರಿಯಂತೆ ಈ ಬಾರಿಯೂ ಮೂರು ದಿನ ಗಣೇಶ ಮೂರ್ತಿ ಇಡಲಾಗುತ್ತದೆ. ರಾಜ್ಯದ ಜನರ ಆಶಯದಂತೆ ಗಣೇಶ ಪ್ರತಿಷ್ಠಾಪನೆಯಾಗಿದೆ. ನ್ಯಾಯಾಲಯ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ವಿವಿಧ ಜಿಲ್ಲೆಗಳಿಂದ ಜನರು ಗಣೇಶನ ದರ್ಶನ ಪಡೆಯಲು ಬರುತ್ತಿದ್ದಾರೆ ಎಂದರು.
ಇದನ್ನೂ ಓದಿ:ನಿವೃತ್ತ ಶಿಕ್ಷಕನಿಂದ ಮಣ್ಣಿನ ಗಣಪತಿ ನಿರ್ಮಾಣ; ತಂದೆಯ ನೆರವಿಗೆ ವಿದೇಶದಿಂದ ಬರುವ ಮಕ್ಕಳು