ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವುದು ನಿಜಕ್ಕೂ ಮನಸ್ಸಿಗೆ ಖುಷಿ ತಂದಿದೆ. ಇಲ್ಲಿನ ಸಿಬ್ಬಂದಿಯ ಸಹಭಾಗಿತ್ವದೊಂದಿಗೆ ನಾನು ಸಂತೋಷದಿಂದ ಕರ್ತವ್ಯ ನಿರ್ವಹಿದ್ದು ಬಹಳ ಖುಷಿಯ ವಿಚಾರ ಎಂದು ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ್ ಸಿಂಗ್ ಹೇಳಿದರು.
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲು ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಅಕ್ಟೋಬರ್ ತಿಂಗಳಿನಲ್ಲಿ ಹುಬ್ಬಳ್ಳಿಗೆ ವ್ಯವಸ್ಥಾಪಕ ನಿರ್ದೇಶಕನಾಗಿ ಬಂದೆ. ಸುಮಾರು ಎರಡು ವರ್ಷ ಐದು ತಿಂಗಳ ಕಾಲ ನಾನು ಇಲ್ಲಿ ಸೇವೆ ಸಲ್ಲಿಸಿದ್ದೇನೆ. ಸುಮಾರು ಏಂಟು ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ, ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಬಹಳ ಖುಷಿ ತಂದಿದೆ ಎಂದರು.
ಈಗಾಗಲೇ ನೈಋತ್ಯ ರೈಲ್ವೆ ವಲಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಂಡ ನೈಋತ್ಯ ರೈಲ್ವೆ ಹಲವು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿದೆ. ಅಲ್ಲದೇ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಯಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ನಿಲ್ದಾಣ ವಿಶ್ವಮಾನ್ಯತೆ ಪಡೆದಿದ್ದು, ಗಿನ್ನಿಸ್ ದಾಖಲೆ ಸೇರಲಿದೆ ಎಂದು ಹೇಳಿದರು.