ಧಾರವಾಡ:ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದಾರೆ. ಹೀಗಾಗಿ, ಅಧಿಕಾರಿಗಳು ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನವನ್ನು ಚುರುಕುಗೊಳಿಸಿ, ಪ್ರತಿದಿನ ತಪ್ಪದೇ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗ ವಿಡಿಯೋ ಸಂವಾದ ಜರುಗಿದ ನಂತರ ಅವರು ಅಧಿಕಾರಿಗಳಿಗೆ ಸೂಚಿಸಿದರು. ಕೊರೊನಾ ಹೋಗಿದೆ ಎಂದು ಭಾವಿಸಿ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಗುಂಪು ಗೂಡುವುದು, ಸಂಚರಿಸುವುದು ಸಾಮಾನ್ಯವಾಗುತ್ತಿದೆ. ಈ ರೀತಿಯ ಭಾವನೆ ಹಾಗೂ ವರ್ತನೆಗಳಿಂದ ನಾವು ಕೊರೊನಾದ ಎರಡನೇ ಅಲೆಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಕೊರೊನಾ ಜಾಗೃತಿ ಹಾಗೂ ಮಾಸ್ಕ್ ಅಭಿಯಾನಕ್ಕಾಗಿ ರಚಿಸಿರುವ ಅಧಿಕಾರಿಗಳ ತಂಡ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಪರಿಣಾಮಕಾರಿಯಾಗಿ ಅಭಿಯಾನ ಜಾರಿಗೊಳಿಸಬೇಕು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.