ಹುಬ್ಬಳ್ಳಿ: ಕೊರೊನಾಗೆ ಜನರು ಬೆಚ್ಚಿಬಿದ್ದಿದ್ದಾರೆ. ಆಸ್ಪತ್ರೆಗೆ ಹೋದರೆ ಮರಳಿ ಮನೆಗೆ ಬರುತ್ತೇವೋ, ಇಲ್ಲವೋ ಎನ್ನುವ ಭಯ ಶುರುವಾಗಿದೆ. ಈ ಆತಂಕಕ್ಕೆ ಕಾರಣವಾಗಿದ್ದು, ಪ್ರತಿನಿತ್ಯ ಆ ಆಸ್ಪತ್ರೆಯಲ್ಲಿ 7 ರಿಂದ 8 ಜನ ಬಲಿಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲೇ ಅತೀ ಹೆಚ್ಚು ಸಾವು ಸಂಭವಿಸುತ್ತಿರುವುದಕ್ಕೆ ಸಾರ್ವಜನಿಕರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ ಎಂಬ ಬಿರುದಾಂಕಿತ ಪಡೆದಿದೆ. ಉತ್ತರ ಕರ್ನಾಟಕದ ಅತಿ ದೊಡ್ಡ ಆಸ್ಪತ್ರೆ ಎಂಬೆಲ್ಲ ಕೀರ್ತಿ ಇದಕ್ಕಿದೆ. ಆದರೆ ಈ ಆಸ್ಪತ್ರೆಗೆ ಕೋವಿಡ್ನಿಂದ ಚಿಕಿತ್ಸೆಗೆ ದಾಖಲಾಗುತ್ತಿರುವವರಿಗೆ ಭಯ ಆರಂಭವಾಗಿದೆ. ಕೋವಿಡ್ ಸೋಂಕಿಗೆ ಪ್ರತಿನಿತ್ಯ 7 ರಿಂದ 8 ಜನರು ಕಿಮ್ಸ್ ಆಸ್ಪತ್ರೆಯಲ್ಲಿ ಬಲಿಯಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 200ರ ಗಡಿ ಹತ್ತಿರ ತಲುಪಿದ್ದು, ಈವರೆಗೆ 193 ಜನರು ಸಾವನ್ನಪ್ಪಿದ್ದಾರೆ. ಧಾರವಾಡದಲ್ಲಿ ದಿನವೊಂದಕ್ಕೆ 200ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಕೇವಲ 345 ಜನರಿಗೆ ಕೊರೊನಾ ಅಂಟಿತ್ತು. ಅಲ್ಲದೆ ಈ ವೈರಸ್ನಿಂದ 8 ಜನ ಜೀವ ಕಳೆದುಕೊಂಡಿದ್ದರು. ಆದರೆ ಕೇವಲ ಜುಲೈ ತಿಂಗಳೊಂದರಲ್ಲೇ ಬರೋಬ್ಬರಿ 148 ಜನ ಬಲಿಯಾಗಿದ್ದು, ಸಹಜವಾಗೇ ಇಲ್ಲಿನ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.