ಹುಬ್ಬಳ್ಳಿ: ಕೋಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಟಾಟಾ, ಏಕಸ್ ಸೇರಿದಂತೆ ಹಲವು ಕಂಪನಿಗಳು ಸಿ.ಎಸ್.ಆರ್ ನಿಧಿಯಡಿ ಜಿಲ್ಲೆಯಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಎದುರಿಸಲು 7 ಕೋಟಿ ರೂಪಾಯಿ ಧನ ಸಹಾಯ ನೀಡಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಹುಬ್ಬಳ್ಳಿಯ ನವೀನ್ ಹೋಟೆಲ್ನಲ್ಲಿ ಉದ್ಯಮಿಗಳು ಹಾಗೂ ಕೈಗಾರಿಕಾ ಸಂಘದ ಪ್ರತಿನಿಧಿಗಳೊಂದಿಗೆ ಕೋವಿಡ್-19 ನಿಯಂತ್ರಣ ಮತ್ತು ಸಿಎಸ್ಆರ್ ನಿಧಿ ಬಳಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಗಳ ಸಿಎಸ್ಆರ್ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗಳಿಗೆ ಅಗತ್ಯವಿರುವ ವೆಂಟಿಲೇಟರ್, ಬೆಡ್, ಆಕ್ಸಿ ಪಲ್ಸ್ ಮೀಟರ್, ಆಕ್ಸಿಜನ್, ಪಿ.ಪಿ.ಕಿಟ್, ಮಾಸ್ಕ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಹುಬ್ಬಳ್ಳಿ ಧಾರವಾಡ ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ನಗರವಾಗಿದೆ. ಕಂಪನಿಗಳು ನಿಧಿ ನೀಡಲು ಮುಂದೆ ಬಂದರೆ ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ನಿಧಿ ಬಳಕೆಗೆ ಅನುವು ಮಾಡಿಕೊಡಲಿದೆ ಎಂದರು.
ಲಕ್ಷಣ ರಹಿತ ಕೋವಿಡ್ ರೋಗಿಗಳಿಗಾಗಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇಲ್ಲಿಗೆ ಆಟದ ಸಾಮಾನುಗಳು, ಪುಸ್ತಕ, ಟಿ.ವಿ.ಸೆಟ್, ಆರ್.ಓ.ಪ್ಲಾಂಟ್, ಬಿಸಿ ನೀರು ತಯಾರಿಸುವ ಘಟಕಗಳನ್ನು ಸಿ.ಎಸ್.ಆರ್ ನಿಧಿಯಡಿ ಕಂಪನಿಗಳು ನೀಡಬಹುದು. ಸಾಂಕ್ರಾಮಿಕ ರೋಗದ ತರುವಾಯ ಇವುಗಳು ವಿದ್ಯಾರ್ಥಿಗಳಿಗೆ ಬಳಕೆಯಾಗಲಿವೆ. ಕಂಪನಿಗಳು ಇಚ್ಚಿಸಿದರೆ ಜಿಲ್ಲಾಡಳಿತ ವತಿಯಿಂದ ನೌಕರರ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಓ ಡಾ.ಬಿ.ಸಿ. ಸತೀಶ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಅಬಕಾರಿ ಉಪ ಆಯುಕ್ತ ಶಿವನಗೌಡ ಪಾಟೀಲ್, ಹೆಸ್ಕಾಂ ಎಂ.ಡಿ. ಇಬ್ರಾಹಿಂ ಮೈಗೂರ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ವೈದ್ಯಾಧಿಕಾರಿ ಯಶವಂತ ಮದೀನಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಮೋಹನ ಭರಮಕ್ಕನವರ, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ್ ನಾಸಿ, ಕೈಗಾರಿಕಾ ಉದ್ಯಮಿಗಳು ಪಾಲ್ಗೊಂಡಿದ್ದರು.