ಹುಬ್ಬಳ್ಳಿ: ಬೆಳೆ ಸಮೀಕ್ಷೆ ಸರಿಯಾಗಿ, ಸಮರ್ಪಕವಾಗಿದೆಯೋ ಇಲ್ಲವೋ ಎಂಬ ಗೊಂದಲ ಪ್ರತಿಯೊಬ್ಬ ರೈತನಲ್ಲಿಯೂ ಕೂಡ ಇದ್ದೆ ಇರುತ್ತದೆ. ಸಮೀಕ್ಷೆಯಲ್ಲಿ ಲೋಪದೋಷವಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಹೀಗೆ ಸಮೀಕ್ಷೆಯ ಪ್ರತಿ ಪ್ರಕ್ರಿಯೆಗಳನ್ನು ಕುಳಿತಲ್ಲೇ ಪರಿಶೀಲಿಸಬಹುದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ ‘ನನ್ನ ಬೆಳೆ ನನ್ನ ಹಕ್ಕು’ಸಮೀಕ್ಷೆಯ ವಿವರಗಳನ್ನು ವೀಕ್ಷಿಸಲು ‘ಬೆಳೆ ದರ್ಶಕ’ಆ್ಯಪ್ ಬಿಡುಗಡೆಗೊಳಿಸಲಾಗಿದೆ.
ರೈತರೇ ತಮ್ಮ ಹೊಲದಲ್ಲಿ ನಡೆಸಿದ ಸಮೀಕ್ಷೆ ಸ್ವಲ್ಪ ಹಿನ್ನೆಡೆಯಾಗಿದ್ದರ ಹಿನ್ನೆಲೆ ಕೃಷಿ ಇಲಾಖೆಯು ಖಾಸಗಿ ಸಂಪರ್ಕ ವ್ಯಕ್ತಿಗಳು, ಗ್ರಾಮ ಸಹಾಯಕರು, ಕೃಷಿ ಸಹಾಯಕರನ್ನು ಸಮೀಕ್ಷೆಗೆ ನಿಯೋಜಿಸಿತ್ತು. ಈ ವೇಳೆ ಬೆಳೆ ಸಮೀಕ್ಷೆ ಬಹಳಷ್ಟು ವ್ಯತ್ಯಾಸ ಕಂಡು ಬರಬಹುದು. ಇದರಿಂದ ರೈತರು ಬೆಳೆ ಪರಿಹಾರದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಮೀಕ್ಷೆ ಪುನರಾವಲೋಕನ ಮಾಡಿಕೊಳ್ಳಲು ಬೆಳೆ ದರ್ಶಕ ಆ್ಯಪ್ ಸಹಕಾರಿಯಾಗಲಿದೆ.