ಬೆಂಗಳೂರು: ಯುವಕನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡರಾತ್ರಿ ಕೆ ಆರ್ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಇರುವ ಬಸ್ ನಿಲ್ದಾಣದಲ್ಲಿ ನಡೆದಿದೆ. ಆನಂದ್ (32) ಕೊಲೆಯಾದ ದುರ್ದೈವಿ. ಬೆಂಗಳೂರಿನ ಮಾರಪ್ಪ ಗಾರ್ಡನ್ ನಲ್ಲಿ ವಾಸವಾಗಿದ್ದ ಆನಂದ್, ಸಿಟಿ ಮಾರ್ಕೆಟ್ ಸೇರಿದಂತೆ ಬೇರೆ ಬೇರೆ ಕಡೆ ಮೂಟೆ ಹೊರುವ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ, ರಾತ್ರಿ ಕತ್ತು ಸೀಳಿ ಕೊಲೆ ಮಾಡಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕಾಗಮಿಸಿದ ವಿವಿ ಪುರಂ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದೆ.
ಪ್ರಾಥಮಿಕ ತನಿಖೆಯಲ್ಲಿ ಪರಿಚಿತರಿಂದಲೇ ಆನಂದ್ನ ಹತ್ಯೆಯಾಗಿರುವುದು ಪತ್ತೆಯಾಗಿದೆ. ಬೇರೆಡೆ ಕೊಲೆ ಮಾಡಿ ಮೃತದೇಹವನ್ನು ಬಸ್ ನಿಲ್ದಾಣದಲ್ಲಿ ತಂದಿಟ್ಟಿರುವ ಅನುಮಾನ ಕೂಡ ವ್ಯಕ್ತವಾಗಿದೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ದಂಪತಿ ಒಂದೇ ಕಡೆ ಸಾವು:ಪೊಲೀಸರು ಪರಿಶೀಲಿಸಿ ತನಿಖೆ- ಧಾರವಾಡ: ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ. ಧಾರವಾಡ ನಗರದ ಭವಾನಿ ನಗರದ ನಿವಾಸಿಗಳಾದ ರಾಜು ರೇವಾಳ (46), ಗೀತಾ ರೇವಾಳ(40) ಮೃತ ದಂಪತಿಗಳು. ಮಂಗಳವಾರ ಬೆಳಗ್ಗೆ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದ ಬಳಿ ದಂಪತಿ ಶವಗಳು ಪತ್ತೆಯಾಗಿವೆ.
ಇಬ್ಬರು ದಂಪತಿ ಕಟ್ಟಡ ಕೂಲಿ ಕಾರ್ಮಿಕರಾಗಿದ್ದರು. ಸಲಕಿನಕೊಪ್ಪ ಗ್ರಾಮಕ್ಕೆ ಮಾವಿನ ತೋಟ ಕಾಯುವ ಕೆಲಸಕ್ಕೆ ಬಂದಿದ್ದರು. ಅವರು ಕುಟುಂಬಸ್ಥರಿಂದ ದೂರವಿದ್ದರು. ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದರು. ಮದ್ಯ ವ್ಯಸನಿಗಳಾಗಿದ್ದ ದಂಪತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮದ್ಯ ಕುಡಿದು ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮಂಗಳವಾರ ಬೆಳಗ್ಗೆ ಇಬ್ಬರ ಶವ ಒಂದೇ ಕಡೆ ಪತ್ತೆಯಾಗಿದೆ. ದಂಪತಿ ಅಕ್ಕಪಕ್ಕ ಮದ್ಯ ಪಾಕೀಟ್ ಕಾಣಿಸಿಕೊಂಡಿವೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ತನಿಖೆ ಮುಂದುವರಿಸಿದ್ದಾರೆ.
ಕುಡುಕ ಗಂಡನ ಕಾಟಕ್ಕೆ ಬೇಸತ್ತು ಪತ್ನಿ ಮಗ ಸೇರಿ ಕೊಲೆ- ಬೆಳಗಾವಿ:ಕುಡುಕ ಗಂಡನ ಕಾಟಕ್ಕೆ ಬೇಸತ್ತ ಪತ್ನಿ ತನ್ನ ಮಗನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ನಡೆದಿದೆ. ಚಂದ್ರಕಾಂತ ಮಾವರಕರ್(42) ಕೊಲೆಯಾದ ವ್ಯಕ್ತಿ.
ಹಳ್ಳೂರು ಗ್ರಾಮದಲ್ಲಿ ದ್ಯಾಮವ್ವ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರೆ ಇದ್ದು, ಕೊಲೆಯಾದ ಚಂದ್ರಕಾಂತ ಮದ್ಯ ಸೇವಿಸಿ ಪತ್ನಿ ಸಾವಿತ್ರಿ ಜತೆ ಜಗಳ ಮಾಡಿದ್ದಾನೆ. ಈ ವೇಳೆ ಪತ್ನಿ, ಮಗ ಹಾಗೂ ಪತಿ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಪತ್ನಿ ಸಾವಿತ್ರಿ ಹಾಗೂ ಮಗ ಸುನೀಲ್ ಕಬ್ಬಿಣದ ರಾಡ್ನಿಂದ ಜೋರಾಗಿ ಚಂದ್ರಕಾಂತ ತಲೆಗೆ ಹೊಡೆದಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಚಂದ್ರಕಾಂತನನ್ನು ಸ್ಥಳೀಯರೆಲ್ಲಾ ಸೇರಿ ಮೂಡಲಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಚಂದ್ರಕಾಂತ ಮೃತಪಟ್ಟಿದ್ದಾನೆ.ಸಮೀಪದ ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ವಿದ್ಯುತ್ ತಂತಿ ಹರಿದು ಬಿದ್ದು 11 ಜಾನುವಾರುಗಳ ದುರ್ಮರಣ - ವಿಡಿಯೋ