ಧಾರವಾಡ:ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನರ್‌ರಚನೆ ವಿಚಾರಕ್ಕೆ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಚರ್ಚೆ ಸೂಕ್ತವಲ್ಲ ಎಂದು ಹೇಳಿದ್ದಾರೆ. ಮುಖಂಡರು, ಶಾಸಕರು ಚರ್ಚಿಸಬೇಡಿ ಎಂದಿದ್ದಾರೆ. ಸಮಯ, ಸಂದರ್ಭ ಬಂದಾಗ ವರಿಷ್ಠರು ಹೇಳುತ್ತಾರೆ ಎಂದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ 28 ಲೋಕಸಭಾ ವೀಕ್ಷಕರ ನೇಮಕವಾಗಿದೆ. ಎಲ್ಲ ಜಿಲ್ಲೆಗಳಲ್ಲಿ ವೀಕ್ಷಕರು ಸಭೆಗಳನ್ನು ಮಾಡುತ್ತಿದ್ದಾರೆ. ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು ಹಾಗು ಕಾರ್ಯಕರ್ತರನ್ನು ಮಾತನಾಡಿಸಿದ್ದಾರೆ. ನಂತರ ಒಂದು ಪ್ಯಾನಲ್ ಮಾಡುತ್ತಾರೆ. ಹತ್ತು ದಿನಗಳಲ್ಲಿ ಮಹತ್ವದ ಸಭೆ ಆಗುತ್ತದೆ. ಎಲ್ಲ ವೀಕ್ಷಕರು, ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರ ಜತೆ ಸಭೆ ಮಾಡುತ್ತಾರೆ. ಈ ಸಭೆಯ ಬಳಿಕ ಕೆಪಿಸಿಸಿ ಅಧ್ಯಕ್ಷರು, ಸಿಎಂ, ವರಿಷ್ಠರಿಗೆ ಪಟ್ಟಿ ರವಾನೆ ಮಾಡುತ್ತಾರೆ. ಜನವರಿ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ತಿಳಿಸಿದರು.
ವಿನಯ ಕುಲಕರ್ಣಿ ಹೇಳಿಕೆ ವಿಚಾರ: ಪಕ್ಷದಲ್ಲಿ ಅಂತಿಮ ತೀರ್ಮಾನ ವರಿಷ್ಠರದ್ದು. ಯಾರು ಮಂತ್ರಿ ಇರಬೇಕು, ಯಾರಿಗೆ ಬೇರೆ ಅಧಿಕಾರ ಸಿಗಬೇಕು ಎಂಬುದನ್ನು ವರಿಷ್ಠರೇ ತೀರ್ಮಾನ ಮಾಡುತ್ತಾರೆ. ಈಗಾಗಲೇ ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಇದ್ದಾರೆ. ಮಂತ್ರಿ ಮಂಡಲ ಈಗ ಪೂರ್ಣ ಆಗಿದೆ. ಸದ್ಯಕ್ಕೆ ಅದರ ಬಗ್ಗೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.