ಧಾರವಾಡ: ಸಾಮಾನ್ಯವಾಗಿ ನಲ್ಲಿ ತಿರುವಿದರೆ ನೀರು ಬರಬೇಕು. ಆದರೆ, ಇಲ್ಲಿ ನಲ್ಲಿ ತಿರುವಿದರೆ ನೀರು ಬದಲು (ಕೆಂಪು ಬಣ್ಣ ಮಿಶ್ರಿತ) ರಕ್ತದಂತಿರುವ ನೀರು ಬರುತ್ತಿದೆ. ಇಂತಹದ್ದೊಂದು ಆಶ್ಚರ್ಯಕರ ದೃಶ್ಯ ಕಂಡು ಬಂದಿದ್ದು ಧಾರವಾಡದ ಗೊಲ್ಲರ ಓಣಿ ಹಾಗೂ ಹೂಗಾರ ಓಣಿಯಲ್ಲಿ.
ಕಳೆದ ವಾರದಿಂದ ಈ ಬಡಾವಣೆಗಳ ನಲ್ಲಿಯಲ್ಲಿ ಕೆಂಪು ಮಿಶ್ರಿತ ಬಣ್ಣದ ನೀರು ಬರುತ್ತಿದ್ದು ಸ್ಥಳೀಯರು ಗಾಬರಿಗೊಳಗಾಗಿದ್ದಾರೆ. ನೀರು ರಕ್ತದ ಬಣ್ಣದಲ್ಲಿ ಬರುತ್ತಿರುವುದರಿಂದ ಬಡಾವಣೆಯ ಮುಖಂಡರು ಜಲ ಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಸಮೀಪದಲ್ಲಿ ಕಸಾಯಿಖಾನೆ ಇರುವುದರಿಂದ ಇಲ್ಲಿನ ನೀರು ಕೊಳವೆಗಳಲ್ಲಿ ಸೇರಿಕೊಂಡಿದೆ. ಇದರಿಂದಲೇ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಸಾಲದೆಂಬಂತೆ ನಲ್ಲಿಯಿಂದ ಬರುತ್ತಿರುವ ನೀರು ಮಾಂಸದ ವಾಸನೆಯಿಂದ ಕೂಡಿದೆ ಎಂದು ಬಡಾವಣೆಯ ಸಾರ್ವಜನಿಕರು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಳೆದು ಒಂದು ತಿಂಗಳಿಂದ ಇಲ್ಲಿಯ ಬಡಾವಣೆಯ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಜಲ ಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಬದಲು ಒಬ್ಬರಿಗೊಬ್ಬರಿಗೂ ಆರೋಪ ಮಾಡುತ್ತಾ ಪಲಾಯನ ಮಾಡಿದ್ದು ಸ್ಥಳೀಯರನ್ನು ರೊಚ್ಚಿಗೇಳಿಸಿದೆ. ಬಡಾವಣೆಯ ಜನರ ಸಮಸ್ಯೆ ಮಾತ್ರ ಹಾಗೇ ಇದ್ದು, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.