ಧಾರವಾಡ : ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಮ್ಮು ಕಾಶ್ಮೀರದ ಅಮರನಾಥ ಮಾರ್ಗ ಮಧ್ಯೆ ಗುಡ್ಡಕುಸಿತ ಉಂಟಾಗಿ ಅಮರನಾಥದಲ್ಲಿ ಧಾರವಾಡದ ಐವರು ತಮ್ಮದೇ ಸ್ವಂತ ಹಣದಲ್ಲಿ ಶ್ರೀನಗರ ತಲುಪಿದ್ದಾರೆ. ಪಂಚತಾರಣಿ ಬಳಿ ಸಿಲುಕಿದ್ದ ಐವರು ಧಾರವಾಡ ಯಾತ್ರಿಗಳು ಸುರಕ್ಷಿತವಾಗಿ ಶ್ರೀನಗರ ತಲುಪಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಟೆಂಟ್‌ನಲ್ಲಿ ವಾಸವಾಗಿದ್ದ ಯಾತ್ರಿಗಳು ಸರ್ಕಾರದಿಂದ ಯಾವುದೇ ಸಹಾಯ ಸಿಗದ ಹಿನ್ನೆಲೆ ಹೆಲಿಕ್ಯಾಪ್ಟರ್ ಮೂಲಕ ಶ್ರೀನಗರಕ್ಕೆ ಪ್ರಯಾಣಿಸಿದ್ದಾರೆ.
ಪ್ರತಿಯೊಬ್ಬರಿಗೆ 4200ರೂ. ನೀಡಿ ಹೆಲಿಕ್ಯಾಪ್ಟರ್ನಲ್ಲಿ ಪ್ರಯಾಣಿಸಿ ಸದ್ಯ ಐವರು ಶ್ರೀನಗರದಲ್ಲಿದ್ದಾರೆ. ರಾಕೇಶ ನಾಝರೆ, ವಿಠ್ಠಲ ಬಾಚಗುಂಡಿ, ಹರೀಶ ಸಾಳುಂಕೆ, ನಾಗರಾಜ ಮತ್ತು ಮಡಿವಾಳಪ್ಪ ಕೊಟಬಾಗಿ ಸುರಕ್ಷಿತವಾಗಿದ್ದು, ಜು. 3 ರಂದು ಧಾರವಾಡದಿಂದ ತೆರಳಿದ್ದರು. ಜು. 6ರಂದು ಅಮರನಾಥ ದರ್ಶನ ಮಾಡಿ ವಾಪಸ್ ಬರುವಾಗ ವೇಳೆ ಭಾರಿ ಮಳೆಯಾದ ಪರಿಣಾಮ ಗುಡ್ಡ ಕುಸಿತ ಉಂಟಾಗಿ ಮಾರ್ಗ ಬಂದ್ ಆಗಿತ್ತು. ಇದರಿಂದ ಅಮರನಾಥದಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದರು.
ಯಾತ್ರಿಗಳಿಗೆ ಅಗತ್ಯ ನೆರವು : ಅಮರನಾಥಯಾತ್ರೆಗೆ ರಾಜ್ಯದಿಂದ ತೆರಳಿದ್ದ ಯಾತ್ರಾರ್ಥಿಗಳು ಸುರಕ್ಷಿವಾಗಿದ್ದು, ಅವರಿಗೆ ಅಗತ್ಯ ನೆರವು ಒದಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಗೆ ತಿಳಿಸಿದ್ದಾರೆ. ಇಂದು ಶೂನ್ಯವೇಳೆಯಲ್ಲಿ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಅಮರನಾಥಯಾತ್ರೆಗೆ ಹೋಗಿದ್ದ 18 ಸಾವಿರ ಯಾತ್ರಾರ್ಥಿಗಳು ಹವಾಮಾನ ವೈಪರಿತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ರಾಜ್ಯದಿಂದ ತೆರಳಿರುವ ಯಾತ್ರಾರ್ಥಿಗಳು ಜಮ್ಮು ಮತ್ತು ಕಾಶ್ಮೀರ ಸರ್ಕಾರದ, ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆ, ಸೇನಾಪಡೆಗಳ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದರು.