NWKRTC ಯ ಚಾಲಕ ತರಬೇತಿಯಲ್ಲಿ ಲಂಚದ ಆರೋಪ - ತನಿಖೆಗೆ ಆದೇಶಿಸಿದ ಎಂಡಿ ಹುಬ್ಬಳ್ಳಿ:ಕೆಲ ತಿಂಗಳಿಂದ ಸರ್ಕಾರದ ಮಟ್ಟದಲ್ಲಿ ಲಂಚಾವತಾರ, ಶೇ 40ರಷ್ಟು ಕಮಿಷನ್ ಆರೋಪ ಕೇಳಿಬಂದಿತ್ತು. ಆದರೆ ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿಯೂ ವ್ಯಾಪಕ ಲಂಚಾವತಾರ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದೆ. ಬಡ ಯುವಕರಿಗೆ ಉಚಿತವಾಗಿ ನೀಡಬೇಕಾಗಿರುವ ವಾಹನ ತರಬೇತಿಗೆ ಸಾವಿರಾರು ರೂಪಾಯಿ ಲಂಚ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದವರಿಗೆ ಕಿರುಕುಳ ನೀಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರ ಬಡ ಎಸ್ಸಿ, ಎಸ್ಟಿ ಯುವಕರ ಜೀವನೋಪಾಯಕ್ಕಾಗಿ ಸಹಾಯವಾಗಲಿ ಅಂತ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಉಚಿತ ಡ್ರೈವಿಂಗ್ ಹೇಳಿಕೊಡಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ತರಬೇತಿ ಕೇಂದ್ರವನ್ನು ಆರಂಭಿಸಿದೆ. ಇಲ್ಲಿ ತರಬೇತಿಗೆಂದು ಬರುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ವಸತಿ, ಊಟ ಮತ್ತು ಭಾರಿ ವಾಹನದ ಲೈಸೆನ್ಸ್ನ್ನೂ ಸಹ ಉಚಿತವಾಗಿ ಮಾಡಿಸಿಕೊಡುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ.
ಅಭ್ಯರ್ಥಿಗಳ ಆರೋಪ ಏನು?:ಇದಕ್ಕಾಗಿ ಒಂದು ತರಬೇತಿ ಕೇಂದ್ರವನ್ನು, ಓರ್ವ ಪ್ರಿನ್ಸಿಪಾಲ್ ಮತ್ತು ನುರಿತ ಚಾಲಕರನ್ನು ಸಹ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ತರಬೇತಿ ಮುಗಿಯುವರೆಗೂ ಒಂದು ಪೈಸೆ ಫೀ ಕಟ್ಟಿಸಿಕೊಳ್ಳದಂತೆ ಸರ್ಕಾರ ಆದೇಶ ನೀಡಿದೆ. ಇಲ್ಲಿ ವಾಹನ ತರಬೇತಿದಾರರು ಅಭ್ಯರ್ಥಿಗಳಿಂದ 5 ರಿಂದ 6 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಅದು ಕೂಡ ಪೋನ್ ಪೇ, ಗೂಗಲ್ ಪೇ ಮೂಲಕ ಅಭ್ಯರ್ಥಿಗಳಿಂದ ವಾಹನ ತರಬೇತಿದಾರರು ಪಡೆದುಕೊಂಡಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಗುರುನಾಥ ಮಾಡಿರುವ ಆರೋಪ ಇದು: ’’ಹಣ ನೀಡಿದರೆ ಮಾತ್ರ ಲೈಸೆನ್ಸ್ ಪರೀಕ್ಷೆಯಲ್ಲಿ ಪಾಸ್ ಮಾಡಲಾಗುತ್ತದೆ. ಇಲ್ಲವಾದರೆ ಆರ್ಟಿಒ ಅವರು ಫೇಲ್ ಮಾಡುತ್ತಾರೆ. ಇದಕ್ಕೆ ನೀವೇ ಹೊಣೆ ಎಂದು ತರಬೇತಿ ನೀಡುವ ಅಧಿಕಾರಿಗಳು ಭಯ ಹುಟ್ಟಿಸಿ ಹಣ ಪಡೆಯುತ್ತಿದ್ದಾರೆ. 15 ದಿನದ ಟ್ರೈನಿಂಗ್ ನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆಫೀಸ್ನಲ್ಲಿ ಹಣ ಪಡೆಯದೇ ಹೊರಗಡೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದವರಿಗೆ ಕಿರುಕುಳ ನೀಡಲಾಗುತ್ತದೆ‘‘ ಎಂದು ತರಬೇತಿ ಪಡೆಯುತ್ತಿರುವ ಅಭ್ಯರ್ಥಿ ಗುರುನಾಥ ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ಬೋರಲಿಂಗಯ್ಯ:ಆದರೆ, ಈ ಆರೋಪವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ಬೋರಲಿಂಗಯ್ಯ ಅಲ್ಲಗಳೆದಿದ್ದಾರೆ. ‘‘ಸರ್ಕಾರ ಉಚಿತವಾಗಿ ತರಬೇತಿ ನೀಡುತ್ತಿದೆ. ಊಟ ಹಾಗೂ ವಸತಿಯ ಜೊತೆಗೆ ಉತ್ತಮವಾದ ತರಬೇತಿ ನೀಡುತ್ತಿದ್ದೇವೆ. ಆರೋಪ ಸತ್ಯಕ್ಕೆ ದೂರವಾದದ್ದು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ‘‘ ಎನ್ನುತ್ತಿದ್ದಾರೆ.
ಸಾರಿಗೆ ಸಂಸ್ಥೆ ನಿರ್ದೇಶಕರು ಹೇಳಿದ್ದಿಷ್ಟು:ಆದರೆ, ಇದಕ್ಕೆ ವಾಯುವ್ಯ ಸಾರಿಗೆ ಸಂಸ್ಥೆ ನಿರ್ದೇಶಕ ಭರತ್ ಪ್ರತಿಕ್ರಿಯಿಸಿ, ’’ಲಂಚ ಪಡೆದಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದೇನೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತಗೆದುಕೊಳ್ಳಲಾಗುವುದು. ದೂರು ನೀಡಿದವರ ಮೇಲೆ ಕಿರುಕುಳ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ‘‘ ಎಂದಿದ್ದಾರೆ.
ಇದನ್ನೂ ಓದಿ:ಗ್ರಾಮ ಪಂಚಾಯಿತಿ ನೌಕರರಿಂದ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ