ಹುಬ್ಬಳ್ಳಿ :ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 'ಕಲಿಕೆ ಭಾಗ್ಯ' ಯೋಜನೆಯಡಿ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು ರಾಜ್ಯ ಸರ್ಕಾರ ಕಡಿತ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಕಿಮ್ಸ್ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಈಗ ಕಾಂಗ್ರೆಸ್ ಸರ್ಕಾರ ಭಾರೀ ಪ್ರಮಾಣದಲ್ಲಿ ಸಹಾಯಧನ ಕಡಿತ ಮಾಡಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಇದು ಕಾರ್ಮಿಕ ವಿರೋಧಿ ಧೋರಣೆ ಎಂದು ಕಿಡಿಕಾರಿದರು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಮಕ್ಕಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು ಎರಡು ವರ್ಷದಿಂದ ವಿತರಿಸಿಲ್ಲ. ಇತ್ತೀಚೆಗೆ ನಡೆದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ನೀಡಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ. ಹಾಗಾಗಿ ಸಹಾಯಧನ ಕಡಿತದ ಆದೇಶ ಹಿಂಪಡೆಯಬೇಕು. ಬಾಕಿ ಸಹಾಯಧನ ವಿತರಣೆ, ವೈದ್ಯಕೀಯ, ಪಿಂಚಣಿ, ಹೆರಿಗೆ, ಮದುವೆ, ಅಂತ್ಯಕ್ರಿಯೆ ಸೇರಿ ಹಲವು ಸೌಲಭ್ಯಗಳ ಸಹಾಯಧನ ಸಮರ್ಪಕ ವಿತರಣೆ, ಹೊಸ ತತ್ರಾಂಶದಲ್ಲಿನ ಸಮಸ್ಯೆ ಪರಿಹರಿಸುವಂತೆ ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು.
1ರಿಂದ 4ನೇ ತರಗತಿವರೆಗಿನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 5000 ರೂ. ನೀಡಲಾಗುತ್ತಿತ್ತು. ಆದರೆ ಇದೀಗ ಅದನ್ನು ಕಾಂಗ್ರೆಸ್ ಸರ್ಕಾರ 1100 ರೂ.ಗೆ ಇಳಿಸಿದೆ. ಹಾಗೆಯೇ 5 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 8000 ರೂ. ರಿಂದ 1250 ರೂಪಾಯಿಗೆ ಇಳಿಕೆ ಮಾಡಿದೆ. 9 ರಿಂದ 10ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿದ್ದ 12000 ರೂಪಾಯಿ ಈಗ 3000 ರೂ.ಗೆ ಕಡಿತಗೊಳಿಸಿದೆ. ಪಿಯುಸಿ ವಿದ್ಯಾರ್ಥಿಗಳ 15000 ರೂಪಾಯಿಯನ್ನು 4600 ರೂ.ಗೆ ಇಳಿಸಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಅಲ್ಲದೆ, ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ 25000 ರೂ. ಅನ್ನು 6000 ರೂ.ನೀಡಲಾಗಿದೆ. ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ 50000 ರೂಪಾಯಿದಿಂದ 10000ರೂ.ಗೆ, ಪಿಜಿ ವಿದ್ಯಾರ್ಥಿಗಳಿ 30000 ರೂ.ಗಳಿಂದ 10000 ರೂ.ಗೆ, ಐಟಿಐ/ಡಿಪ್ಲಮೊ ವಿದ್ಯಾರ್ಥಿಗಳಿಗೆ 20000 ರೂ. ರಿಂದ 4600 ರೂ.ಗೆ ನರ್ಸಿಂಗ್/ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ 40000 ರೂ. ರಿಂದ 10000 ರೂ. ಬಿ.ಇಡಿ 35000 ರೂ. ರಿಂದ 6000 ರೂ.ಗೆ, ಡಿ.ಇಡಿ 25000 ರೂ. ರಿಂದ 4600 ರೂ. ಗೆ, ವೈದ್ಯಕೀಯ 60000 ರೂ. ರಿಂದ 11000 ರೂ. ಗೆ, ಎಲ್ಎಲ್‌ಬಿ/ಎಲ್‌ಎಲ್‌ಎಂ 30000 ರೂ. ಗೆ ರಿಂದ 10000 ರೂ. ಗೆ ಪಿಹೆಚ್‌ಡಿ/ಎಂಫಿಲ್ 25000 ರೂ. ನಿಂದ 11000 ರೂ.ಗೆ ಕಡಿತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ಹಿಂದಿನಂತೆ ತಕ್ಷಣ ಶೈಕ್ಷಣಿಕ ಸಹಾಯಧನವನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಇದನ್ನೂ ಓದಿ :ಶಿವಾನಂದ ಪಾಟೀಲ್ ಸಚಿವರಾಗಲು ಅಲ್ಲ, ಶಾಸಕರಾಗಲೂ ಯೋಗ್ಯರಲ್ಲ: ರೈತರ ಆಕ್ರೋಶ