ಹುಬ್ಬಳ್ಳಿ : ಕಳೆ ನಾಶಕ ಸಿಂಪಡಿಸಲು ಹೋಗಿ ಅರಣ್ಯಾಧಿಕಾರಿಯೊಬ್ಬರು ಚಿಕಿತ್ಸೆ ಫಲಿಸದೆ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕುಮಟಾ ತಾಲೂಕಿನ ಬಾಡ ಗ್ರಾಮದ ಯೋಗೇಶ್ ನಾಯಕ್ ಮೃತ ಅರಣ್ಯಾಧಿಕಾರಿ. ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಯಕ್, ಕಳೆದ ಒಂದು ವಾರದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.
ಯೋಗೇಶ್ ನಾಯಕ್ ಅವರು ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಹೆಂಡತಿ ಮತ್ತು ಮಗುವನ್ನು ಹೊಂದಿದ್ದಾರೆ. ಜೂನ್ 27 ರಂದು ಸಾಗವಾನಿ ಮಡಿಗೆ (ಟೀಕ್ ಬೆಡ್ ) ಕಳೆನಾಶಕ ಹಾಕುವ ವೇಳೆ ಎಡವಟ್ಟಾಗಿದೆ. ಬೀಜಗಳನ್ನು ನೆಡುವ ಮುನ್ನ ತೋಡನ್ನು ತೆಗೆದು ಭೂಮಿಯೊಳಗೆ ಹದ ಮಾಡುವ ಕಾರ್ಯ ಮಾಡುತ್ತಿದ್ದ ವೇಳೆಯಲ್ಲಿ ಪ್ಯಾರಾಗ್ಯೂಟ್ ಎಂಬ ಕೀಟ ನಾಶಕವನ್ನು ಸಾಗವಾನಿ ಮಡಿಯೊಳಗೆ ಸಿಂಪಡಿಸಿದ್ದರು.
ಇದನ್ನೂ ಓದಿ :DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ವಿಜಯಕುಮಾರ್ ಆತ್ಮಹತ್ಯೆ
ಕಳೆನಾಶಕ ಸಿಂಪಡಿಸಿ ಮನೆಗೆ ಬಂದ ಒಂದು ದಿನದ ನಂತರ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿತ್ತು. ತಕ್ಷಣವೇ ಸ್ಥಳೀಯ ಖಾಸಗಿ ವೈದ್ಯರನ್ನು ಸಂಪರ್ಕಿಸಿದಾಗ ಆಂಟಿಬಯಾಟಿಕ್ ಕೊಟ್ಟಿದ್ದಾರೆ. ಆದರೂ ಉರಿ ಕಡಿಮೆಯಾಗದ ಕಾರಣ ಮರುದಿನ ಯೋಗೇಶ್ ನಾಯ್ಕ ಅವರು ತಮ್ಮ ಕಾರಿನಲ್ಲೇ ತೆರಳಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕರ್ತವ್ಯನಿರತ ಎಎಸ್‌ಐ ಸಾವು : ಕರ್ತವ್ಯನಿರತ ಎಎಸ್‌ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಾ ಪೊಲೀಸ್ ಠಾಣೆಯಲ್ಲಿ ನಿನ್ನೆ (ಜುಲೈ 7 ರಂದು) ನಡೆದಿದೆ. ಶಿರಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಗಂಗಣ್ಣ (56) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಕರ್ತವ್ಯದಲ್ಲಿದ್ದ ವೇಳೆ ಗಂಗಣ್ಣ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ, ಜೊತೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ :ತುಮಕೂರು: ಕರ್ತವ್ಯನಿರತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹೃದಯಾಘಾತದಿಂದ ಸಾವು