ಹುಬ್ಬಳ್ಳಿ:ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿದ್ದಂತೆ ಇದೀಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹಣ ಹೂಡಿಕೆ ಮಾಡುವ ಮೂಲಕ ದುಪ್ಪಟ್ಟು ಲಾಭ ಪಡೆಯಲು ಹೋಗಿ ಮಹಿಳೆಯರೇ ಕೈ ಸುಟ್ಟುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಗಿರಿಜಾ ಹಿರೇಮಠ ಹಾಗೂ ವಿಜೇತಾ ಅವರು ತಮಗಾದ ಮೋಸದ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಂಪನಿಯೊಂದಕ್ಕೆ 16,11,982 ಹಾಗೂ 2,00,000 ರೂಪಾಯಿ ಹಣವನ್ನು ಬ್ಯಾಂಕ್ ಮೂಲಕ ವರ್ಗಾವಣೆ ಮಾಡುವ ಮೂಲಕ ವಂಚನೆಗೆ ಒಳಗಾಗಿದ್ದಾರೆ. ಕಂಪನಿಯ ಮರುಳು ಮಾತುಗಳಿಗೆ ಹಾಗೂ ಗ್ರಾಸರಿ ಪ್ರಾಡಕ್ಟ್ಗಳಿಗೆ ಶೇ 33% ರಿಯಾಯಿತಿ ಆಸೆಗೆ ಬಿದ್ದು, ಒಬ್ಬ ಮಹಿಳೆ 17 ಲಕ್ಷ ಮತ್ತೊಬ್ಬ ಮಹಿಳೆ 2 ಲಕ್ಷ ರೂಪಾಯಿ ಹಣವನ್ನು ಬಂಡವಾಳ ಹೂಡಿದ್ದರು.
ಹುಬ್ಬಳ್ಳಿಯ ನಾಲ್ಕೈದು ಕಡೆಗಳಲ್ಲಿ ಕಂಪನಿ ಮಳಿಗೆಗಳನ್ನು ತೆರೆದಿದ್ದು, ಜನ ಖರೀದಿಸುವ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದಲ್ಲಿ ರಿಯಾಯಿತಿ ನೀಡುವುದರ ಜೊತೆಗೆ ಹೊಸ ಔಟ್ಲೆಟ್ಗಳನ್ನು ಮಾಡಿದರೆ, ಇಂತಿಷ್ಟು ಮಾಸಿಕ ಲಾಭ ನೀಡುವುದಾಗಿ ಜನರನ್ನು ನಂಬಿಸಿದ್ದಾರೆ. ಇದರ ಆಸೆಗೆ ಬಿದ್ದ ಸಾಕಷ್ಟು ಜನ ಹಣವನ್ನು ಹೂಡಿಕೆ ಮಾಡಿದ್ದಾರೆ. ಪ್ರಾರಂಭದಲ್ಲಿ ಹಣ ಹೂಡಿಕೆ ಮಾಡಿದವರಿಗೆ ಪ್ರಾಡಕ್ಟ್ಗಳನ್ನು ಕೊಟ್ಟಿದ್ದು, ನಂತರದಲ್ಲಿ ಕಂಪನಿಯವರು ಉತ್ಪನ್ನಗಳನ್ನು ಕೊಡದೇ ಎಸ್ಕೇಪ್ ಆಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.