ಹುಬ್ಬಳ್ಳಿ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ಹಣವನ್ನು ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಂಕೋಲಾದಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ 15 ಲಕ್ಷ ಹಣ ಪತ್ತೆಯಾಗಿದೆ. ಕೂಡಲೇ ಚೆಕ್ ಪೋಸ್ಟ್ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕಲಗೌಡ ಪಾಟೀಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ದಾಖಲೆ ಇಲ್ಲದ ಹಣ, ಬಟ್ಟೆ ವಶಕ್ಕೆ ಪಡೆದಿರುವ ಪೊಲೀಸರು:ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸರು ಶನಿವಾರ ರಾತ್ರಿ ಚೆಕ್ ಪೋಸ್ಟ್ಗಳಲ್ಲಿ ಕಾರ್ಯಾಚರಣೆ ನಡೆಸಿ ದಾಖಲೆಯಿಲ್ಲದ 6 ಲಕ್ಷ 40 ಸಾವಿರ ಹಣ ಹಾಗೂ 5 ಲಕ್ಷ ಬೆಲೆ ಬಾಳುವ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದರು. ಗಜೇಂದ್ರಗಡ ಬಳಿ ಇರುವ ಇಲಕಲ್ಲ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಹಣ ಸಿಕ್ಕಿತ್ತು. ಕೊಪ್ಪಳದಿಂದ ಹುಬ್ಬಳ್ಳಿಗೆ ಹೊರಟಿದ್ದ ಕಾರಿನಲ್ಲಿ ಹಣ ಹಾಗೂ ಬೆಂಗಳೂರಿನಿಂದ ಗದಗಕ್ಕೆ ಬರುತ್ತಿದ್ದ ಲಾರಿಯಲ್ಲಿ ಬಟ್ಟೆ ಮಟಿರಿಯಲ್ ಪತ್ತೆಯಾಗಿತ್ತು.
"ತಪಾಸಣೆ ವೇಳೆ ಹಣ ಹಾಗೂ ಬಟ್ಟೆಗಳು ಪತ್ತೆಯಾಗಿತ್ತು, ಇದಕ್ಕೆ ಸೂಕ್ತ ದಾಖಲೆ ಇರಲಿಲ್ಲ. ಹಾಗಾಗಿ ಹಣ ಹಾಗೂ ಬಟ್ಟೆ ಮಟಿರಿಯಲ್ಸ್ ವಶಕ್ಕೆ ಪಡೆಯಲಾಗಿದೆ" ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದರು. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.