ಕರ್ನಾಟಕ

karnataka

ETV Bharat / state

ಕೊನೆಗೂ ಬಗೆಹರಿದ ಕೋಣ ಗಲಾಟೆ, ಬೇಲಿಮಲ್ಲೂರು ಗ್ರಾಮಕ್ಕೆ ಬಿಟ್ಟುಕೊಟ್ಟ ಹಾರನಹಳ್ಳಿ! ಯಾಕೀ ಕಿತ್ತಾಟ?

ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳ ನಡುವೆ ಗಲಾಟೆಗೆ ಕಾರಣವಾಗಿದ್ದ ಕೋಣ ಯಾರಿಗೆ ಸೇರಬೇಕೆಂಬ ವಿವಾದ ಕೊನೆಗೂ ಸುಖಾಂತ್ಯ ಕಂಡಿದೆ.

By

Published : Oct 19, 2019, 12:00 AM IST

ದಾವಣಗೆರೆ:ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳ ನಡುವೆ ಗಲಾಟೆಗೆ ಕಾರಣವಾಗಿದ್ದ ಕೋಣ ಯಾರಿಗೆ ಸೇರಬೇಕೆಂಬ ವಿವಾದ ಕೊನೆಗೂ ಸುಖಾಂತ್ಯ ಕಂಡಿದೆ. ಕೊನೆಗೂ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮಕ್ಕೆ ಕೋಣ ಬಿಟ್ಟುಕೊಡಲು ಶಿವಮೊಗ್ಗದ ಹಾರನಹಳ್ಳಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಮಾರಿ ಜಾತ್ರೆಗೆ ಬಿಟ್ಟಂತಹ ಕೋಣವೊಂದು ಬೇಲಿಮಲ್ಲೂರು ಹಾಗೂ ಹಾರನಹಳ್ಳಿ ಗ್ರಾಮಸ್ಥರ ನಡುವೆ ಸಮರಕ್ಕೆ ಕಾರಣ ಆಗಿತ್ತು. ಹೊನ್ನಾಳಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.

ಇದನ್ನೂ ಓದಿ...ಗೋ ಶಾಲೆಗೆ ಮಾರಿ ಕೋಣ, ಕೋರ್ಟ್​ ಮೆಟ್ಟಿಲೇರುತ್ತಾರಾ ಗ್ರಾಮಸ್ಥರು!?

ಗ್ರಾಮಸ್ಥರು ಆಣೆ-ಪ್ರಮಾಣ ಮಾಡಿದ್ದು, ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ದೇವರು ಕೊಡುತ್ತಾನೆ ಎಂಬ ಪ್ರಮಾಣ ಮಾಡಿಸಿಕೊಳ್ಳಲಾಗಿದೆ. ಹೊನ್ನಾಳಿ ಹಾಗೂ ಕುಂಸಿ ಪೊಲೀಸರ ಸಮ್ಮುಖದಲ್ಲಿಯೇ ಈ ಆಣೆ ಪ್ರಮಾಣ ನಡೆದಿದೆ.

ಈಗ ಆಗಿರುವ ವಿವಾದಕ್ಕೆ ಮತ್ತಷ್ಟು ಆಸ್ಪದ ನೀಡದೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಾಮೀಜಿ ಸಲಹೆ ನೀಡಿದ್ದರು. ಇದಕ್ಕೆ ಎರಡೂ ಗ್ರಾಮಗಳು ಒಪ್ಪಿದರು. ಹಾರನಹಳ್ಳಿ ಗ್ರಾಮಸ್ಥರು ತಮ್ಮದೇನೂ ತಪ್ಪಿಲ್ಲ. ಈ ಕೋಣ ತಮ್ಮ ಊರಿಗೆ ಸೇರಿದ್ದು. ನಾವು ಪ್ರಮಾಣ ಮಾಡುತ್ತೇವೆ ಎಂದರು. ಅದೇ ರೀತಿಯಲ್ಲಿ ಬೇಲಿಮಲ್ಲೂರು ಗ್ರಾಮಸ್ಥರು ಇದೇ ವಾದ ಮಂಡಿಸಿದರು. ಬಳಿಕ ಎರಡೂ ಗ್ರಾಮಗಳು ಆಣೆ ಪ್ರಮಾಣ ಮಾಡಿದವು. ಅಂತಿಮವಾಗಿ ಬೇಲಿಮಲ್ಲೂರು ಗ್ರಾಮಕ್ಕೆ ಬಿಟ್ಟುಕೊಡಲು ಹಾರನಹಳ್ಳಿ ಗ್ರಾಮಸ್ಥರು ತೀರ್ಮಾನಿಸಿದರು.

ಕೋಣದ ರಕ್ತ ತೆಗೆದರೆ ಮಾರಿ ಪೂಜೆ ಮಾಡಲಾಗುವುದಿಲ್ಲ. ಇದು ಸಂಪ್ರದಾಯಕ್ಕೆ ಧಕ್ಕೆಯಾಗುತ್ತೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನೂರಾರು ವರ್ಷಗಳಿಂದಲೂ ಮಾರಿ ಜಾತ್ರೆಗೆ ಬಿಟ್ಟ ಕೋಣದ ರಕ್ತ ತೆಗೆಯುವಂತಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ, ಗ್ರಾಮಸ್ಥರ ಕಿತ್ತಾಟದಿಂದ ಸಂಪ್ರದಾಯಕ್ಕೆ ಚ್ಯುತಿ ಬರಬಾರದು ಎಂಬ ಕಾರಣವೂ ಈ ತೀರ್ಮಾನದ ಹಿಂದಿದೆ ಎಂದು ಹೇಳಲಾಗಿದೆ.

ಪೊಲೀಸ್ ಇಲಾಖೆಯು ಕೋಣ, ಬೇಲಿಮಲ್ಲೂರು ಹಾಗೂ ಹಾರನಹಳ್ಳಿಯಲ್ಲಿರುವ ಎಮ್ಮೆಗಳ ರಕ್ತದ ಸ್ಯಾಂಪಲ್ ಪಡೆದು ಯಾವ ಗ್ರಾಮಕ್ಕೆ ಸೇರಬೇಕೆಂಬ ಬಗ್ಗೆ ಡಿಎನ್ಎ ಪರೀಕ್ಷಿಸಲು ಮುಂದಾಗಿದ್ದರು. ಅಂತಿಮವಾಗಿ ನಿರ್ಧಾರ ಹೊರ ಬಿದಿದ್ದು, ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.

ABOUT THE AUTHOR

...view details