ದಾವಣಗೆರೆ : ಜಿಲ್ಲೆಯಲ್ಲಿ ಮಣ್ಣು ಮುಕ್ಕ ಹಾವು ಮಾರಾಟ ಜಾಲ ಇರುವ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಲಾಡ್ಜ್‌ವೊಂದರಲ್ಲಿ ಮಣ್ಣು ಮುಕ್ಕ ಹಾವು ಸಮೇತ ನಾಲ್ವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದರು.
ಆದರೆ, ಈ ಘಟನೆ ಮಾಸುವ ಮುನ್ನವೇ ಇದೀಗ ನಗರದ ಬೇತೂರು ರಸ್ತೆಯಲ್ಲಿ ಹಾವನ್ನು ಮಾರಾಟ ಮಾಡುತ್ತಿದ್ದವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬೇಟೆಯಾಡಿ ಹಾವನ್ನು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ನಿವಾಸಿ ಮಂಜಪ್ಪ ಎಂಬುವನನ್ನು ಬಂಧಿಸಲಾಗಿದೆ.
ಮೂಢನಂಬಿಕೆಯೇ ಇವರ ಬಂಡವಾಳ :ಈ ಮಣ್ಣು ಮುಕ್ಕ ಹಾವು ದೇವರ ಸಮಾನ ಎಂದು ಕೆಲವರನ್ನು ನಂಬಿಸಿ ವ್ಯವಹಾರ ಮಾಡುವ ಜಾಗದಲ್ಲಿ ಇರಿಸಿದ್ರೆ ಅವರ ಸಂಪತ್ತು ಹೆಚ್ಚಾಗುತ್ತದೆ. ಬಳಿಕ ಈ ಹಾವಿನ ಮೂಲಕ ನಿಧಿಯನ್ನು ಕೂಡ ಕಂಡು ಹಿಡಿಯಬಹುದಾಗಿದೆ ಎಂದು ಜನರನ್ನು ನಂಬಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲವರು ಈ ಹಾವನ್ನು ಲಕ್ಷ ಹಾಗೂ ಕೋಟಿಗಟ್ಟಲೇ ಹಣ ನೀಡಿ ಖರೀದಿಸುವವರಿದ್ದಾರಂತೆ.