ದಾವಣಗೆರೆ:ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಭರ್ಜರಿ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ಸಮರ್ಥ್ ಶಾಮನೂರು ತಮ್ಮ ಅಜ್ಜ ಶಾಮನೂರು ಶಿವಶಂಕರಪ್ಪ ಹಾಗೂ ತಂದೆ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೆಲುವಿಗಾಗಿ ಹರಕೆ ಕಟ್ಟಿಕೊಂಡು ಬರಿಗಾಲಿನಲ್ಲೇ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತೆ ಹಿಡಿತ ಸಾಧಿಸಲು ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ಕೈಗೊಂಡಿದ್ದಾರೆ. ದಕ್ಷಿಣ ಬಿಜೆಪಿಯ ಅಭ್ಯರ್ಥಿ ಬಿ.ಜೆ.ಅಜಯ್ ಕುಮಾರ್ ಮತ್ತು ಉತ್ತರ ಕ್ಷೇತ್ರದ ಲೋಕಿಕೆರೆ ನಾಗರಾಜ್ ಅವರು ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳ ವಿರುದ್ಧ ಗೆಲುವು ಸಾಧಿಸಬೇಕೆಂಬ ಪಣ ತೊಟ್ಟಿದ್ದಾರೆ.
ಶಾಮನೂರು ಮತ್ತು ಪುತ್ರ ಈಗಾಗಲೇ ನಾಮಪತ್ರಗಳನ್ನು ಸಲ್ಲಿಸಿ, ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಮತಬೇಟೆ ನಡೆಸುತ್ತಿದ್ದಾರೆ. ಇದಲ್ಲದೇ ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್, ಪುತ್ರ ಸಮರ್ಥ್ ಶಾಮನೂರು, ಪುತ್ರಿ ಶ್ರೇಷ್ಠಾ ಶಾಮನೂರು ಕೂಡಾ ಪ್ರಚಾರ ನಡೆಸುತ್ತಿದ್ದಾರೆ.
ಅಜ್ಜ ಹಾಗೂ ತಂದೆಯ ಗೆಲುವಿಗೆ ಮೊಮ್ಮಗ ಸಮರ್ಥ್ ಶಾಮನೂರು ಎರಡು ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ಮಾಡುವ ಮೂಲಕ ಬರಿಗಾಲಿನಲ್ಲಿ ಮತಬೇಟೆಗೆ ಇಳಿದಿದ್ದಾರೆ. ಇಬ್ಬರ ಗೆಲುವಿಗೆ ವೀರಭದ್ರೇಶ್ವರ ಸ್ವಾಮಿಯ ಕೆಂಡೋತ್ಸವ ವೇಳೆ, ಕೆಂಡ ಹಾಯ್ದು ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.