ದಾವಣಗೆರೆ: ಮಕ್ಕಳನ್ನು ಮುಂದೆ ಬಿಟ್ಟು ಭಿಕ್ಷೆ ಬೇಡುವುದನ್ನು ಒಂದು ಧಂದೆ ಮಾಡಿಕೊಳ್ಳಲಾಗಿದೆ. ಮಕ್ಕಳು, ವಯಸ್ಕರು ಎಗ್ಗಿಲ್ಲದೆ ಭಿಕ್ಷಾಟನೆ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ನಿರಾಶ್ರಿತರ ಪರಿಹಾರ ಕೇಂದ್ರದ ಅಧಿಕಾರಿಗಳು ದಾಳಿ ನಡೆಸಿ ಭಿಕ್ಷಾಟನೆ ಮಾಡುವವರನ್ನು ರಕ್ಷಿಸಿ ಪರಿಹಾರ ಕೇಂದ್ರಕ್ಕೆ ಕರೆದೊಯ್ದು ಅವರ ಆರೈಕೆ ಮಾಡಲಾಗುತ್ತಿದೆ.
ದಾವಣಗೆರೆಯಲ್ಲಿ ಭಿಕ್ಷಾಟನೆ ಎಗ್ಗಿಲ್ಲದೇ ನಡೆಯುತ್ತಿದೆ. ಕೆಲವರು ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ಮಾಡುತ್ತಿದ್ದರೆ, ಇನ್ನು ಕೆಲವರು ವಯಸ್ಕರನ್ನು ಮುಂದೆ ಬಿಟ್ಟು ಭಿಕ್ಷಾಟನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ನಿರಾಶ್ರಿತರ ಪರಿಹಾರ ಕೇಂದ್ರದ ಸಮಿತಿಯಿಂದ ದಾವಣಗೆರೆ ನಗರದ ವಿವಿಧೆಡೆ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರಲ್ಲಿ ಅರಿವು ಮೂಡಿಸಿ 8 ಮಂದಿ ವಶಕ್ಕೆ ಪಡೆದು ಅವರನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳುಹಿಸಲಾಯಿತು.
ನಿರಾಶ್ರಿತರ ಆರೈಕೆ ಕೇಂದ್ರದ ಅಧಿಕಾರಿಗಳಿಂದ ದಾಳಿ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಎಂ. ಬಸವರಾಜ ನಾಯ್ಕ ನೇತೃತ್ವದಲ್ಲಿ ಹುಬ್ಬಳ್ಳಿ ಅಧಿಕಾರಿಗಳು ಮಹಾನಗರ ಪಾಲಿಕೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅರುಣಾ ಟಾಕೀಸ್ ಹಾಗೂ ಶಾಮನೂರು ದೇವಾಲಯಗಳಲ್ಲಿ ಸಂಚರಿಸಿ ಭಿಕ್ಷುಕರನ್ನು ವಶಕ್ಕೆ ಪಡೆದು ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿ ಅಲ್ಲಿ ಅವರಿಗೆ ವಸತಿ ಜೊತೆಗೆ ಸ್ವಾವಲಂಬಿಯಾಗಿ ಬದುಕಲು ತರಬೇತಿ ನೀಡಲಾಗುತ್ತದೆ.
ಭಿಕ್ಷಾಟನೆ ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ನಿರ್ದೇಶನದಂತೆ ಮೈಸೂರು, ಬೆಳಗಾವಿ, ಸೇರಿದಂತೆ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡಿದರನ್ನು ನಿರಾಶ್ರಿತರ ಕೇಂದ್ರದಲ್ಲಿ ಇರಿಸಿ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನ ಸಾಗಿಸುವ ರೀತಿ ಮಾಡಲಾಗುತ್ತದೆ.
ರಾಜ್ಯದಲ್ಲಿ 2 ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 850, ದಾವಣಗೆರೆಯಲ್ಲಿ 180 ಸೇರಿ ರಾಜ್ಯದಲ್ಲಿ 3000ಕ್ಕೂ ಹೆಚ್ಚು ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅವರಿಗೆ ಹೈನುಗಾರಿಕೆ, ಕೃಷಿ, ನೇಯ್ಗೆ ಮುಂತಾದವುಗಳಲ್ಲಿ ತರಬೇತಿ ನೀಡಿ ಸದೃಢರಾಗಿ ಸ್ವಾವಲಂಬಿಗಳಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಗುವುದು. ವಾರದಲ್ಲಿ 3 ದಿನ ಜಾಗೃತಿ ಮೂಡಿಸಲಾಗುವುದು ಎಂದು ನಿರಾಶ್ರಿತರ ಕೇಂದ್ರದ ಪರಿಹಾರ ಸಮಿತಿ ಅಧ್ಯಕ್ಷ ಎಂ. ಬಸವರಾಜ್ ತಿಳಿಸಿದರು.
ಒಟ್ಟಾರೆ ಭಿಕ್ಷಾಟನೆಯನ್ನೇ ಒಂದು ದಂಧೆ ಮಾಡಿಕೊಂಡಿರುವ ಖದೀಮರಿಗೆ ನಿರಾಶ್ರಿತರ ಪರಿಹಾರ ಕೇಂದ್ರದ ಅಧಿಕಾರಿಗಳು ಏಕಾಏಕಿ ಧಾಳಿ ನಡೆಸಿ ಸಖತ್ ಬಿಸಿ ಮುಟ್ಟಿಸಿದ್ದಾರೆ. ಅದೇನೆ ಆಗಲಿ ವ್ಯಾಸಂಗ ಮಾಡುವ ವಯಸ್ಸಿನಲ್ಲಿ ಮಕ್ಕಳು ಭಿಕ್ಷಾಟನೆ ಮಾಡುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಅಧಿಕಾರಿಗಳು ಜಿಲ್ಲೆಯಲ್ಲಿ ಭಿಕ್ಷಾಟನೆಗೆ ಪೂರ್ಣ ವಿರಾಮ ಕಲ್ಪಿಸಬೇಕಾಗಿದೆ.
ಇದನ್ನೂ ಓದಿ:ಮೂರು ತಿಂಗಳಲ್ಲಿ ಬೆಂಗಳೂರು ಭಿಕ್ಷಾಟನೆ ನಿಯಂತ್ರಣ: ಕೋಟಾ ಶ್ರೀನಿವಾಸ ಪೂಜಾರಿ