ದಾವಣಗೆರೆ: ನಗರ ದೇವತೆ ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ನಡೆಸಿದರೆ ಮಳೆ ಬರುತ್ತದೆ ಎಂಬ ಸಂಪ್ರದಾಯ ಹಾಗೂ ನಂಬಿಕೆ ಹಿನ್ನೆಲೆ ಇಲ್ಲಿನ ಜನರು ಸಂತೆ ನಡೆಸಿದ್ದರು. ಕಾಕತಾಳೀಯವೋ ಅಥವಾ ದೇವಿಯ ಅನುಗ್ರಹವೋ ಗೊತ್ತಿಲ್ಲ. ಸಂತೆ ನಡೆಸಿ ಮೂರೇ ದಿನಕ್ಕೆ ಬೆಣ್ಣೆ ನಗರಿಯಲ್ಲಿ ಉತ್ತಮ ಮಳೆಯಾಗಿದೆ.
ಹುಸಿಯಾಗಲಿಲ್ಲ ಬೆಣ್ಣೆ ನಗರಿ ಜನರ ನಂಬಿಕೆ... ಸಂತೆಯಾದ ಮೂರೇ ದಿನಗಳಲ್ಲಿ ಫಲಿಸಿತು ಪ್ರಾರ್ಥನೆ! - kannadanews
ದಾವಣಗೆರೆಯ ಜನರು ಮಳೆಗಾಗಿ ಪ್ರಾರ್ಥಿಸಿ ದುಗ್ಗಮ್ಮ ದೇವಿ ಸನ್ನಿಧಿಯಲ್ಲಿ ಸಂತೆ ಮಾಡಿದ್ದರು. ಜನರ ಈ ಪ್ರಾರ್ಥನೆ ಫಲಿಸಿದ್ದು, ಸಂತೆಯಾದ ನಂತರ ಮಳೆರಾಯ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಬಾರದ್ದಕ್ಕೆ ವರುಣನ ಆಗಮನಕ್ಕೆ ಪ್ರಾರ್ಥಿಸಿ ದುಗ್ಗಮ್ಮನ ಸನ್ನಿಧಾನದ ಆವರಣದಲ್ಲಿ ದೇವಸ್ಥಾನ ಕಮಿಟಿ ಹಾಗೂ ಮಹಾನಗರ ಪಾಲಿಕೆಯಿಂದ ಸಂತೆ ಹಮ್ಮಿಕೊಳ್ಳಲಾಗಿತ್ತು. ಸಕಾಲಕ್ಕೆ ಮಳೆಯಾಗದೇ ಬರಗಾಲ ಪರಿಸ್ಥಿತಿ ಎದುರಾದಾಗ ಇಲ್ಲಿನ ನಗರ ದೇವತೆ ಶ್ರೀದುರ್ಗಾಂಬಿಕ ದೇವಸ್ಥಾನ ಆವರಣದಲ್ಲಿ ವಾರದ ಸಂತೆ ನಡೆಸುವುದು ಇಲ್ಲಿನ ವಾಡಿಕೆ. ಈ ಹಿನ್ನೆಲೆ ಕಳೆದ ಭಾನುವಾರ ಮೊದಲ ಸಂತೆ ನಡೆಸಲಾಗಿತ್ತು, ಮಳೆ ಬರಲಿ ಎಂದು ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ಹಾಕಿಸಿ ದೇವಿಗೆ ವಿಶೇಷ ಪೂಜೆ ಸಹ ಸಲ್ಲಿಸಲಾಗಿತ್ತು. ಅಂದು ಹಿರಿಯರು ಹೇಳಿದಂತೆ ಮೂರೇ ದಿನಗಳಲ್ಲಿ ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ. ಇಂದು ಮಧ್ಯಾಹ್ನ ಸುಮಾರು ಅರ್ಧ ಗಂಟೆಗೆ ಹೆಚ್ಚು ಕಾಲ ಮಳೆ ಸುರಿದಿದ್ದು, ಇದು ದೇವಿಯ ಶಕ್ತಿ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ ದಾವಣಗೆರೆ ದುಗ್ಗಮ್ಮ ಅಂದ್ರೆ ಮಳೆಯ ದೇವತೆ ಎಂದೇ ಖ್ಯಾತಿ ಪಡೆದಿದ್ದಾಳೆ. ಮಳೆ ಬರದಿದ್ದಾಗ ಈ ರೀತಿ ಸಂತೆ ನಡೆಸಿದರೆ ವರುಣ ಕೃಪೆ ತೋರುತ್ತಾನೆ ಎಂಬ ಜನರ ನಂಬಿಕೆ ಮತ್ತಷ್ಟು ಗಟ್ಟಿಗೊಂಡಿದೆ. ಸುಮಾರು 30 ವರ್ಷಕ್ಕೂ ಹಳೇ ಸಂತೆ ಸಂಪ್ರದಾಯ ಹುಸಿಯಾಗದೇ ಮಳೆ ಬಂದಿದ್ದು ರೈತರು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.