ದಾವಣಗೆರೆ :ಆರ್‌ಟಿಒ ಕಚೇರಿಗಳೆಂದ್ರೆ ಜನಜಾತ್ರೆ. ಚಾಲನಾ ಪರವಾನಗಿ, ವಾಹನಗಳ ನೋಂದಣಿ ಸೇರಿ ಇತರೆ ಕೆಲಸಗಳಿರ್ತವೆ. ಇಲ್ಲಿ ಕೆಲಸ ಆಗಬೇಕು ಅಂದ್ರೆ ಅದಕ್ಕೆ ಮಧ್ಯವರ್ತಿಗಳೇ ಸರಿ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಕೊರೊನಾ ಬಂದ ಬಳಿಕ ಇದು ಹೆಚ್ಚಾಗಿದೆಯೇ? ಅಥವಾ ಕೊರೊನಾ ಸೃಸ್ಟಿಸಿದ ಗಂಡಾಂತರದ ಬಿಸಿ ಇವರಿಗೂ ತಟ್ಟಿದೆಯೇ, ವರ್ಷದ ಎಲ್ಲಾ ದಿನಗಳಲ್ಲಿಯೂ ತುಂಬಿ ತುಳುಕುತ್ತಿದ್ದ ಕಚೇರಿ ಈಗ ಹೇಗಿದೆ? ದಿನವಿಡೀ ಕೆಲಸ ಮಾಡುತ್ತಿದ್ದವರು ಈಗ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.
ಕೋವಿಡ್-19 ವಕ್ಕರಿಸಿದ ಬಳಿಕ ಸಾಕಷ್ಟು ಕ್ಷೇತ್ರಗಳು ನಷ್ಟವನ್ನೇ ಅನುಭವಿಸಿದೆಯೇ ಹೊರತು ಲಾಭವನ್ನಲ್ಲ. ಹೀಗೆ ಎಲ್ಲಾ ಕ್ಷೇತ್ರಗಳಿಗೆ ನಷ್ಟ ಆದಂತೆ ಆರ್‌ಟಿಒ ಇಲಾಖೆ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ದ್ವಿಚಕ್ರ, ಟ್ರ್ಯಾಕ್ಟರ್ ಹಾಗೂ ಕಾರುಗಳ ನೋಂದಣಿಯೇನೋ ಸ್ವಲ್ಪ ಮಟ್ಟಿಗೆ ನಡೆದಿದೆ. ಲಾರಿ, ಬಸ್ಗಳ ಮಾಲೀಕರು ಇತ್ತ ಸುಳಿಯುತ್ತಲೇ ಇಲ್ಲ. ಇದರಿಂದಾಗಿ ತಿಂಗಳಿಗೆ ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿಯ ರಸ್ತೆ ಸಾರಿಗೆ ನಿಗಮಕ್ಕೆ ತುಂಬಾನೇ ಹೊಡೆತ ಬಿದ್ದಿದೆ ಎಂದರೆ ತಪ್ಪಾಗಲಾರದು. ಹಿಂದೆ ಬರುತ್ತಿದ್ದ ರಾಜಸ್ವ ಸಂಗ್ರಹವೂ ಸಹ ಕಡಿಮೆಯಾಗಿದೆ. ವಾಹನಗಳ ನೋಂದಣಿಯ ಬಗ್ಗೆ ಕೇಳೋದೆ ಬೇಡ. ಜನರೇ ಮನೆಯಿಂದ ಹೊರ ಬಾರದಿದ್ದರೆ, ಇನ್ನು ವಾಹನಗಳು ಹೇಗೆ ಬರಲಿದೆ?. ಮೂಲಗಳ ಪ್ರಕಾರ ಆರ್‌ಟಿಒ ಕಚೇರಿಯ ಒಂದು ತಿಂಗಳ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ 5 ರಿಂದ 6 ಕೋಟಿ ರೂಪಾಯಿ ನಷ್ಟ ಆಗುತ್ತಿದೆ ಎನ್ನಲಾಗಿದೆ.
ಲಾಕ್ಡೌನ್ನಿಂದಾಗಿ ಬಸ್ಗಳು ರಸ್ತೆಗೆ ಇಳಿಯುವುದೇ ವಿರಳವಾಗಿದೆ. ಇದರಿಂದಾಗಿ ಸಹಜವಾಗಿ ಕಾರು, ಬೈಕ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ಕೊರತೆಯಿಂದಾಗಿ ಅದೆಷ್ಟೋ ಜನ ಒಂದು ಬೈಕ್ ಖರೀದಿಸಿಬಿಡೋಣ, ಡಿಎಲ್ ಮಾಡಿಸೊಕೊಳ್ಳೋಣ ಎಂದು ಯೋಚಿಸುತ್ತಿದ್ದಾರೆ. ಇದರಿಂದಾಗಿ ಪರವಾನಿಗೆಗೆ ಆರ್‌ಟಿಒ ಕಚೇರಿಯಲ್ಲಿ ಬೇಡಿಕೆ ಸ್ವಲ್ಪ ಜಾಸ್ತಿ ಆಗುತ್ತಿದೆ.
ಇನ್ನು, ಈ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಮಧ್ಯವರ್ತಿಗಳು, ಜನರಿಂದ ಹಣ ಪಡೆದು ಪರವಾನಗಿ ಮಾಡಿಸಿಕೊಡುತ್ತಾರಂತೆ. ಒಬ್ಬ ಮಧ್ಯವರ್ತಿ ಕೈಯಲ್ಲಿ ಏನಿಲ್ಲಾ ಅಂದರೂ 30 ರಿಂದ 40 ಫೈಲ್ಗಳು ಕಾಣಸಿಗುತ್ತವೆ. ಕೊರೊನಾ ಆತಂಕದಿಂದಾಗಿ ಜನರು ಮನೆ ಹೊರಗೆ ಕಾಲಿಡಲು ಭಯಪಡ್ತಿದ್ದಾರೆ. ಅಂತದ್ರಲ್ಲಿ ಆರ್‌ಟಿಒ ಕಚೇರಿಗೆ ಹೋಗುವುದು ದೂರದ ಮಾತು. ಆರ್‌ಟಿಒ ಕಚೇರಿಗೆ ಹೋಗುವ ಬದಲು ಹಣ ಖರ್ಚಾದರೂ ಪರವಾಗಿಲ್ಲ, ಕೆಲಸ ಆದ್ರೆ ಸಾಕಪ್ಪಾ ಎಂಬ ದೃಷ್ಟಿಯಿಂದ ಜನರು ಮಧ್ಯವರ್ತಿಗಳ ಮೊರೆ ಹೋಗ್ತಾರೆ. ಏಜೆಂಟರುಗಳು ಸಹ ಸಿಕ್ಕಿದ್ದೇ ಚಾನ್ಸ್ ಅಂತಾ, ಡ್ರೈವಿಂಗ್ ಲೈಸೆನ್ಸ್, ಎಲ್‌ಎಲ್‌ಆರ್ ಮಾಡಿಕೊಡಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.