ದಾವಣಗೆರೆ: ದಾವಣಗೆರೆಯ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮೂವತ್ತನೇ ವಾರ್ಡಿನ ಚಿಕ್ಕನಹಳ್ಳಿ ಹಾಗೂ ಆವರಗೆರೆಯ ಶಾಲ ಮಕ್ಕಳು ನಿತ್ಯ ಜೀವ ಕೈಯಲ್ಲಿ ಹಿಡಿದು ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ದಾವಣಗೆರೆಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಚಿಕ್ಕನಹಳ್ಳಿಯ ಬಳಿ ಇರುವ ಬಾಯಿ ತೆರೆದ ರಾಜಕಾಲುವೆಗೆ ಸೇತುವೆ ಇಲ್ಲದೇ ಮಕ್ಕಳು ಅಡ್ಡಲಾಗಿ ಹಾಕಿರುವ ವಿದ್ಯುತ್ ಕಂಬಳ ಮೇಲೆ ನಡೆದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಇನ್ನು ಮಳೆ ಬಂದರೇ ಈ ಮಕ್ಕಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಾರೆ. ಅಲ್ಲದೇ ಶಾಲೆಗೆ ತೆರಳಿದರೂ ಜೀವ ಕೈಯಲ್ಲಿ ಹಿಡಿದು ತೆರಳಬೇಕಾಗುತ್ತದೆ. ಚಿಕ್ಕನಹಳ್ಳಿಯಿಂದ ಆವರಗೆರೆ ಗ್ರಾಮದ ಶಾಲೆಗೆ ನಿತ್ಯ ನೂರಾರು ಮಕ್ಕಳು ಹೋಗುತ್ತಿದ್ದಾರೆ. ಆದರೆ ಹೋಗುವ ದಾರಿ ಮಧ್ಯೆ ರಾಜ ಕಾಲುವೆಗೆ ಸೇತುವೆ ವ್ಯವಸ್ಥೆ ಇಲ್ಲದಂತಾಗಿದೆ. ವಿದ್ಯುತ್ ಕಂಬಗಳು ಹಾಗೂ ಸಿಮೆಂಟ್ ಪೈಪ್ಗಳು ಅಡ್ಡ ಹಾಕಲಾಗಿದ್ದು, ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರು ಅದೇ ಮಾರ್ಗವಾಗಿ ನಿತ್ಯ ಸಂಚರಿಸುತ್ತಿದ್ದಾರೆ.
ಅಲ್ಲದೆ, ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳನ್ನ ಪೋಷಕರೇ ಕರೆ ತಂದು ಬಿಟ್ಟು ಮತ್ತೆ ವಾಪಸ್ ಕರೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಇದು ಹಾಲಿ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಅವರ ವಾರ್ಡ್ ಆಗಿದ್ದರೂ ಕೂಡ ಮೂಲ ಸೌಕರ್ಯಗಳು ಇಲ್ಲದೇ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಅಲ್ಲದೇ ಶಾಲೆಗೆ ಬೇರೆ ರಸ್ತೆ ಇದ್ದು, ಅ ರಸ್ತೆ ಮೂಲಕ ಹೋದರೆ ಐದಾರು ಕಿ.ಮೀ ಸುತ್ತು ಹಾಕಿ ಶಾಲೆ ಸೇರಬೇಕಾಗುತ್ತದೆ. ಆ ಮಾರ್ಗದಲ್ಲಿ ಜಾಲಿಗಿಡಗಳೂ ಹೆಚ್ಚು ಬೆಳೆದಿದ್ದು ಅಲ್ಲಿಂದ ಬರಲು ಭಯವಾಗುತ್ತದೆ. ರಾಜ ಕಾಲುವೆಗೆ ಸೇತುವೆ ನಿರ್ಮಿಸಿ ಕೊಟ್ಟರೆ ಉಪಯೋಗವಾಗುತ್ತದೆ ಎಂದು ವಿದ್ಯಾರ್ಥಿನಿ ಅಮೃತ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.