ದಾವಣಗೆರೆ: ಸಮಾಜದ ಸ್ವಾಸ್ಥ್ಯ ಕದಡುವ ರೀತಿಯಲ್ಲಿ ಮಾತನಾಡಿಲ್ಲ. ಕೆಪಿಸಿಸಿ ಮುಖಂಡರು ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಮೇಲೆ ಎಫ್ ಐಆರ್ ದಾಖಲಿಸಲಿ. ಎಲ್ಲದಕ್ಕೂ ಸಿದ್ದನಿದ್ದು, ನಿಜವಾಗಿಯೂ ತಪ್ಪು ಮಾಡಿದ್ದು ಸಾಬೀತಾದರೆ ನನ್ನನ್ನು ನೇಣಿಗೆ ಏರಿಸಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ ಟೀಕೆ ಟಿಪ್ಪಣಿ ಮಾಡಿದರೆ ತಲೆಕೆಡಿಸಿಕೊಳ್ಳಲ್ಲ. ನನ್ನನ್ನು ನಿಂದಿಸಿದರೆ ನನಗೆ ಶ್ರೇಯಸ್ಸು ಅಂದುಕೊಂಡಿದ್ದೇನೆ. ಹೋರಾಟನೇ ನನ್ನ ಬದುಕು. ಇದರಿಂದ ಹಿಂದೆ ಸರಿದಿಲ್ಲ. ಜನರ ಪರವಾಗಿ ಓಡಾಟ ಮಾಡ್ತೇನೆ. ಯಾವುದೇ ಧರ್ಮ, ಜಾತಿ, ವರ್ಗದ ವಿರುದ್ಧ ಮಾತನಾಡಿಲ್ಲ. ಮುಸ್ಲಿಮರು, ಕ್ರಿಶ್ಚಿಯನ್ನರು ಒಂದೇ ತಾಯಿ ಮಕ್ಕಳಿದ್ದಂತೆ. ಯಾವ ಧರ್ಮದ ವಿರೋಧಿ ಅಲ್ಲ ಎಂದರು. ಯಾರು ಬೇಕಾದರೂ ದೂರು ಕೊಡಲಿ. ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ರಕ್ತಗತವಾಗಿ ಹೋರಾಟ ಮೈಗೂಡಿಸಿಕೊಂಡಿದ್ದೇನೆ. ಎಲ್ಲವನ್ನೂ ಸ್ವಾಗತಿಸುತ್ತೇನೆ. ನಾನು ತಪ್ಪು ಮಾಡಿದ್ದರೆ ಪಕ್ಷದ ವರಿಷ್ಠರು, ನನ್ನನ್ನು ಗೆಲ್ಲಿಸಿದ ಜನರು ಶಿಕ್ಷೆ ನೀಡಲಿ. ಅಭಿವೃದ್ಧಿಗಾಗಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಕಾಡುಗಲ್ಲು ಅಂತಿದ್ದ ನನ್ನನ್ನು ಮನುಷ್ಯನಾಗಿ ಜನರು ಮಾಡಿದ್ದಾರೆ ಎಂದ ಅವರು, ಬದುಕಿದ್ದರೆ ತಾನೇ ಪ್ರಾರ್ಥನೆ ಮಾಡುವುದು. ನಾವೇ ಇಲ್ಲ ಎಂದರೆ ಪ್ರಾರ್ಥನೆ ಮಾಡುವುದಾದರೆ ಹೇಗೆ. ಕೊರೊನಾ ಹೊಡೆದೋಡಿಸಲು ಎಲ್ಲರೂ ಮನೆಯಲ್ಲಿರಿ. ಯಾರೂ ಅನವಶ್ಯಕವಾಗಿ ಹೊರಬರಬೇಡಿ ಎಂಬ ಪ್ರಾರ್ಥನೆ ಮಾಡಿದ್ದೇನೆ ಎಂದರು. ಮದ್ಯಪ್ರಿಯರು ನನ್ನ ಬಳಿ ಬಂದು ಎಣ್ಣೆ ಕೇಳ್ತಾರೆ. ದಯವಿಟ್ಟು ಯಾರೂ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ದುಶ್ಚಟಗಳನ್ನ ಬಿಡಿ. ಎಣ್ಣೆ ಬೇಕು ಅಂತಾ ಜನರು ನನಗೂ ಕೇಳುತ್ತಾರೆ. ಎಲ್ಲರೂ ವಾಯುವಿಹಾರ ಸೇರಿದಂತೆ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಕೊಡಿ. ಯಾರೂ ಮದ್ಯ ಬೇಕೆಂದು ಕೇಳಬೇಡಿ. ಮದ್ಯ ಮಾರಾಟ ಪ್ರಾರಂಭ ಕುರಿತಂತೆ ಏಪ್ರಿಲ್ ರ ಬಳಿಕ ಸಿಎಂ ಯಡಿಯೂರಪ್ಪ ನಿರ್ಧರಿಸಲಿದ್ದಾರೆ ಎಂದರು.