ದಾವಣಗೆರೆ:ನಾಳೆ ದಾವಣಗೆರೆಯಲ್ಲಿ ಜರಗುವ ಮೋದಿ ಮಹಾಸಂಗಮಕ್ಕೆ ಸಕಲ ಸಿದ್ಧತೆ ನಡೆಸಲಾಗಿದ್ದು, ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರ ಮಧ್ಯೆ ವೇದಿಕೆಗೆ ಕರೆತರುವ ಪ್ಲಾನ್ ಇರುವುದ್ದರಿಂದ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಈ ವೇಳೆ ಭದ್ರತೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ವೇದಿಕೆಗೆ ಜನರ ಮಧ್ಯೆ ಬರುತ್ತಿದ್ದಾರೆ. ವೇದಿಕೆ ಮಧ್ಯ ಭಾಗದಲ್ಲಿ ವಾಹನ ಬರುವಷ್ಟು ಜಾಗ ಬಿಟ್ಟಿದ್ದೇವೆ, ಸಮಾವೇಶದಲ್ಲಿ ಜನರ ಮಧ್ಯ ಬಂದು ಮೋದಿಯವರು ವೇದಿಕೆ ಹತ್ತುತ್ತಾರೆ ಎಂದು ಮಾಹಿತಿ ನೀಡಿದರು.
ತಪಾಸಣೆ ನಂತರವೇ ಸಮಾವೇಶಕ್ಕೆ ಎಂಟ್ರಿ:ಇನ್ನು ಮಹಾಸಂಗಮ ಸಮಾವೇಶಕ್ಕೆ ಐಪಿಎಸ್ ದರ್ಜೆಯ 8 ಅಧಿಕಾರಿಗಳು, 4000 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಖಾಸಗಿ ಬಸ್ ಮತ್ತು KSRTC ಬಸ್ ಸ್ಟಾಪ್ಅನ್ನು ನಗರದ ಹೊರವಲಯ ಪಿಬಿ ರೋಡ್ನಲ್ಲಿ ಮಾಡಲಾಗಿದೆ. ಜನರು ಬೆಳಿಗ್ಗೆಯಿಂದ ಸಮಾವೇಶಕ್ಕೆ ಬಂದರೆ ಆದಷ್ಟು ಅನಕೂಲವಾಗಲಿದೆ. ಯಾವುದೇ ನೀರಿನ ಬಾಟಲ್ಗಳನ್ನು ಸಮಾವೇಶದ ಜಾಗಕ್ಕೆ ತೆಗೆದುಕೊಂಡು ಹೋಗುವಂತಿಲ್ಲ, ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ವೀಕ್ಷಕರ ಗ್ಯಾಲರಿಗೆ ಬಿಡಲಾಗುತ್ತೆ ಎಂದು ದಾವಣಗೆರೆ ಎಸ್ಪಿ ರಿಷ್ಯಂತ್ ಮಾಹಿತಿ ನೀಡಿದರು.
ಪ್ರಧಾನಿ ಮೋದಿಯವರು ಬರುವುದು ಯಾವಾಗ?:ನಾಳೆ ಪ್ರಧಾನಿ ಮೋದಿ 1.50ಕ್ಕೆ ಬೆಂಗಳೂರಿನ ಹೆಲಿಪ್ಯಾಡ್ನಿಂದ 3.15 ಕ್ಕೆ ದಾವಣಗೆರೆ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. 3.20 ಕ್ಕೆ ಹೆಲಿಪ್ಯಾಡ್ನಿಂದ ದಾವಣಗೆರೆ ಜಿ ಎಂ ಐ ಟಿ ವೇದಿಕೆಗೆ ಆಗಮಿಸಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಸಂಜೆ 5.5 ಕ್ಕೆ ಸಾರ್ವಜನಿಕ ಸಭೆಯಿಂದ ಹೆಲಿಪ್ಯಾಡ್ಗೆ ಪ್ರಯಾಣ ಮಾಡಿ ಸಂಜೆ 5.15 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. 5.50 ಕ್ಕೆ ಶಿವಮೊಗ್ಗ ಏರ್ಪೋರ್ಟ್ ತಲುಪಿ ಅಲ್ಲಿಂದ 5.55 ಕ್ಕೆ ದೆಹಲಿಗೆ ಪ್ರಯಾಣ ಬೆಳಸಲಿದ್ಧಾರೆ.
ನಾಳೆ ನಗರದಲ್ಲಿ ಭಾರೀ ವಾಹನಗಳಿಗೆ ಪ್ರವೇಶ ನಿಷೇಧ:ದಾವಣಗೆರೆಯಲ್ಲಿ ನಾಳೆ ಬಿಜೆಪಿ ಮಹಾಸಂಗಮ ಯಾತ್ರೆ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ವಾಹನಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ನಗರದ ಒಳಗೆ ಪ್ರವೇಶಿಸುವಂತಿಲ್ಲ. ರಾಜ್ಯದ ನಾಲ್ಕು ಭಾಗಗಳಿಂದ ಬರುವ ವಾಹನಗಳಿಗೆ ಹೊರಭಾಗದಲ್ಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೆಂಗಳೂರು, ತುಮಕೂರು, ಹಾಸನ, ಕೊಡಗು, ಮಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮೂಲಕ ಬರುವ ವಾಹನಗಳಿಗೆ ಎಪಿಎಂಸಿ, ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.