ಹರಿಹರ: ಬೇಸಿಗೆ ಆರಂಭವಾಗಿದೆ, ರೈತರಿಗೆ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಅಭಾವ ಉಂಟಾಗದ ರೀತಿಯಲ್ಲಿ ಮುಂಜಾಗ್ರತವಾಗಿ ಅಧಿಕಾರಿಗಳು ಕ್ರಮ ವಹಿಸಬೇಕು. ರೈತರಿಗೆ ಸ್ಪಂದಿಸಲಿಕ್ಕೆ ಆಗದೇ ಇದ್ದರೆ ತಮ್ಮಷ್ಟಕ್ಕೆ ತಾವೇ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಶಾಸಕ ಎಸ್.ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕರ ಭವನದಲ್ಲಿ ನಡೆದ ತಾಲೂಕು ಮಟ್ಟದ ಬೆಸ್ಕಾಂ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಪ್ರತಿದಿನ ನೂರಾರು ರೈತರು ವಿದ್ಯುತ್ ಟ್ರಾನ್ಸಫಾರ್ಮರ್ ಪೂರೈಕೆ ಸಮರ್ಪಕವಾಗಿಲ್ಲ ಮತ್ತು ಕಳಪೆ ವೈಡಿಂಗ್ ಆರೋಪವನ್ನು ಹೊತ್ತು ನನ್ನ ಮನೆ ಬಾಗಿಲಿಗೆ ಬರುತ್ತಿದ್ದಾರೆ. ರೈತರಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದೀರಿ. ರೈತರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವಾದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಲಕ್ಷ್ಮೀಗೆ ಎಚ್ಚರಿಕೆ ನೀಡಿದರು.