ದಾವಣಗೆರೆ:ಹುಚ್ಚು ಪ್ರೇಮಿಯೋರ್ವ ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಗೃಹಿಣಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ ನಾಗರಾಜ್ (25) ಕೊಲೆಯಾದವರು. ಮೂಕಪ್ಪನವರ ಹನುಮಂತ ಕೊಲೆ ಆರೋಪಿ. ಈ ಸಂಬಂಧ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹನುಮಂತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರೀತಿಸಿದವಳು ಕೈಗೆ ಸಿಗಲಿಲ್ಲ ಎಂದು ಪ್ರತಿಭಾಳನ್ನು ಆರೋಪಿ ಕೊಲೆ ಮಾಡಿದ್ದಾನೆ. ಮಹಿಳೆಯ ಸುಖಮಯ ದಾಂಪತ್ಯ ಜೀವನ ಸಹಿಸದೇ ಕಿಡಿಗೇಡಿ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವಿವರ: ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ಘಟನೆ ನಡೆದಿದೆ. ಜಾತ್ರೆ ನಿಮಿತ್ತ ಪ್ರತಿಭಾ ತನ್ನ ಚಿಕ್ಕಮ್ಮನ ಊರಿಗೆ ಬಂದಿದ್ದರು. ಆ ಸಮಯವನ್ನೇ ಬಂಡವಾಳ ಮಾಡಿಕೊಂಡ ಪಾಗಲ್ ಪ್ರೇಮಿ ಹನುಮಂತ ತನ್ನ ಮಾಜಿ ಪ್ರಿಯತಮೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾನೆ. ಜಾತ್ರೆ ಮುಗಿಸಿ ಇನ್ನೇನು ಗಂಡನ ಮನೆಗೆ ಹಿಂದಿರುಗುವಷ್ಟರಲ್ಲಿ ಪಾಗಲ್ ಪ್ರೇಮಿ ಹನುಮಂತ ಪ್ರತಿಭಾಳ ದೇಹದ ಬಹುತೇಕ ಭಾಗಗಳಿಗೆ ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪ್ರತಿಭಾರನ್ನು ದಾವಣಗೆರೆ ಜಿಲ್ಲೆಯ ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಮಾಹಿತಿ ನೀಡಿದ್ದಾರೆ.
ಮೃತ ಪ್ರತಿಭಾ ಮದುವೆಯಾಗುವ ಮುನ್ನ ದುಗ್ಗಾವತಿ ಪಕ್ಕದ ಚಿರಸ್ತಹಳ್ಳಿ ಗ್ರಾಮದ ನಿವಾಸಿ ಹನುವಂತಪ್ಪ ಅದೇ ಗ್ರಾಮದ ಪ್ರತಿಭಾರನ್ನು ಪ್ರೀತಿಸುವುದಾಗಿ ಹೇಳಿಕೊಂಡು ಸುತ್ತುತ್ತಿದ್ದನಂತೆ. ಪ್ರತಿಭಾರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ನಾಗರಾಜ್ ಎಂಬುವರ ಜೊತೆ ವಿವಾಹ ಮಾಡಿಕೊಡಲಾಗಿದ್ದು ದಂಪತಿಗೆ ಓರ್ವ ಗಂಡು ಮಗ ಇದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದ ಮತ್ತಿನಲ್ಲಿ ಕೊಲೆ: ಕುಡಿದ ಮತ್ತಿನಲ್ಲಿ ಸಾಯಿಸುವ ಬಗ್ಗೆ ಮಾತನಾಡಿದ ಎಂಬ ಕಾರಣಕ್ಕೆ ಆತನ ಸ್ನೇಹಿತರೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಶ್ರೀಧರ್ (34) ಎಂಬವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ಆರೋಪಿಗಳಾದ ವೀರಾಂಜನೇಯಲು, ಬುಡ್ಡಪ್ಪ ಹಾಗೂ ಗೋವರ್ಧನ್ ಎಂಬವರನ್ನು ಬಂಧಿಸಲಾಗಿದೆ. ಶ್ರೀಧರ್ ಫಿಸಿಯೋ ಥೆರಪಿಸ್ಟ್ ಆಗಿದ್ದರು. ಅಲ್ಲದೇ ಬಾರ್ನಲ್ಲಿ ಇವರಿಗೆ ಆರೋಪಿ ವೀರಾಂಜನೇಯಲುನ ಪರಿಚಯವಾಗಿತ್ತು. ಕುಡಿದ ಅಮಲಿನಲ್ಲಿ ಶ್ರೀಧರ್ ಆರೋಪಿ ವೀರಾಂಜನೇಯಲುಗೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿಬಿಡ್ತೀನಿ ಎಂದಿದ್ದರಂತೆ.
ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು. ಗಲಾಟೆ ನಡೆದ ತಿಂಗಳು ಕಳೆಯುವಷ್ಟರಲ್ಲಿ ಶ್ರೀಧರ್ ಹತ್ಯೆಗೆ ವೀರಾಂಜನೇಯ ತನ್ನ ಸ್ನೇಹಿತರಾದ ಗೋವರ್ಧನ್, ಬುಡ್ಡಪ್ಪನ ಜೊತೆ ಸಂಚು ರೂಪಿಸಿದ್ದ. ಅದರಂತೆ ಲಕ್ಷ್ಮೀಪುರದ ನಿರ್ಜನ ಪ್ರದೇಶದಲ್ಲಿ ಶ್ರೀಧರನೊಂದಿಗೆ ಮೂವರು ಆರೋಪಿಗಳು ಮದ್ಯದ ಪಾರ್ಟಿಯನ್ನು ಮಾಡಿ ಬಳಿಕ ಅಮಲಿನಲ್ಲಿದ್ದ ಶ್ರೀಧರನನ್ನು ಕೊಚ್ಚಿ ಕೊಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು. ಫೆ.7 ರಂದು ಸುಟ್ಟ ಸ್ಥಿತಿಯಲ್ಲಿ ಶವವನ್ನು ಕಂಡು ಜಮೀನಿನ ಮಾಲೀಕ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ:ಮದ್ಯದ ಅಮಲಿನಲ್ಲಿ ಸಾಯಿಸ್ತೀನಿ ಎಂದಿದ್ದ ಸ್ನೇಹಿತನನ್ನೇ ಸಾಯಿಸಿದ್ದ ಆರೋಪಿಗಳ ಬಂಧನ