ದಾವಣಗೆರೆ :ನಾಲ್ವರು ಗರ್ಭಿಣಿಯರು ಸೇರಿ ಆರು ಮಂದಿಗೆ ನೆಗಟಿವ್ ಬಂದಿದೆ. ಆದರೆ, ಈ ಮೊದಲು ಕೊರೊನಾ ಪಾಸಿಟಿವ್ ವರದಿ ನೀಡಿದ್ದ ಖಾಸಗಿ ಲ್ಯಾಬ್ಗೆ ಉತ್ತರಿಸುವಂತೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್.ಬೀಳಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 18ರಂದು ದೊಡ್ಡಬಾತಿ, ಶ್ಯಾಗಲೆ, ಬಸವನಹಳ್ಳಿ, ಮಾದನಬಾವಿಗೆ ಸಂಬಂಧಿಸಿದ ರೋಗಿ ಸಂಖ್ಯೆ-7804, 7805, 8066, 8067, 8068, 8069ರ ಗಂಟಲು ದ್ರವ ಮಾದರಿಯನ್ನು ನಗರದ ಖಾಸಗಿ ಲ್ಯಾಬ್ಗೆ ಕಳುಹಿಸಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು.
ಆದರೆ, ಅವರು ಯಾವುದೇ ಕಂಟೇನ್ಮೆಂಟ್ ಝೋನ್ ಅಥವಾ ಸೋಂಕಿತರ ಸಂಪರ್ಕಕ್ಕೆ ಬಾರದ ಕಾರಣ ಮತ್ತೊಮ್ಮೆ ಜೂನ್ 20ರಂದು ಮತ್ತೊಂದು ಖಾಸಗಿ ಲ್ಯಾಬ್ಗೆ ಕಳುಹಿಸಿದಾಗ ನೆಗೆಟಿವ್ ಬಂದಿದೆ. ಹಾಗೆಯೇ ಮತ್ತೊಮ್ಮೆ ದೃಢಪಡಿಸಲು ಬೆಂಗಳೂರಿನ ಲ್ಯಾಬ್ಗೆ ಕಳುಹಿಸಿದಾಗಲೂ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿಯಮಾನುಸಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.