ದಾವಣಗೆರೆ: ಬಿ ಎಸ್ ಯಡಿಯೂರಪ್ಪ ಅವರನ್ನ ಸೈಡ್ಲೈನ್ ಮಾಡಲು ಸಾಧ್ಯವೇ ಇಲ್ಲ. ಸೈಡ್ಲೈನ್ ಮಾಡಿದ್ರೆ ಯಡಿಯೂರಪ್ಪನವರಿಗೆ ಕೇಂದ್ರ ಬಿಜೆಪಿಯಲ್ಲಿ ಸಂಸದೀಯ ಮಂಡಳಿಯ ಸದಸ್ಯ ಸ್ಥಾನ ನೀಡ್ತಿರಲಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದರು. ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಗ್ಗೆ ಬಿಎಸ್ವೈಯವರು ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ. ಅಸಮಾಧಾನದ ಪ್ರಶ್ನೆಯೇ ಇಲ್ಲ. ಯಾರು ಕೂಡಾ ಸೈಡ್ಲೈನ್ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರು ಸಕ್ರೀಯವಾಗಿ ರಾಜ್ಯ ರಾಜಕಾರಣದಲ್ಲಿರುತ್ತಾರೆ ಎಂದರು.
ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ: ಶಿರಾ, ಕೆ ಆರ್ ಪೇಟೆಗೆ ಒಂದು ತಿಂಗಳ ಮುಂಚೆ ತೆರಳಿ ಚುನಾವಣೆ ಗೆದ್ದಿದ್ದೇವೆ. ಪಕ್ಷ ಯಾವುದೇ ನಿರ್ಧಾರ ಮಾಡಿದ್ರು ಅಲ್ಲಿ ಸ್ಪರ್ಧಿಸುವೆ. ನಮ್ಮ ತಂದೆ ಈಗ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ನಾನು ಶಿಕಾರಿಪುರ ಕ್ಷೇತ್ರದಲ್ಲಿ ಓಡಾಡುತ್ತಿರುವೆ. ಪಕ್ಷದ ವಿರುದ್ಧ ಮಾತನಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ನನ್ನ ಗಮನಕ್ಕೆ ಬಂದಿಲ್ಲ:ಸ್ಯಾಂಟ್ರೋ ರವಿ ಅವರನ್ನ ರಕ್ಷಣೆ ಮಾಡುವುದಾದ್ರೆ ಅವರನ್ನು ಬಂಧನ ಮಾಡುವ ಪ್ರಶ್ನೆಯೇ ಉದ್ಭವವಾಗ್ತಿರಲಿಲ್ಲ. ಸ್ಯಾಂಟ್ರೋ ರವಿ ಬಂಧನದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಗಳಿಗೆ ಗೃಹ ಸಚಿವರು ಉತ್ತರ ಕೊಡುತ್ತಾರೆ. ಇನ್ನು ಪರಿಷತ್ ಸದಸ್ಯ ಸಿ ಪಿ ಯೋಗಿಶ್ವರ್ ಪಕ್ಷದ ವಿರುದ್ಧ ಆಡಿದ ಆಡಿಯೋ ವೈರಲ್ ಕುರಿತು ಕೇಳಿದ ಪ್ರಶ್ನೆಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಯತ್ನಾಳ್ ಹಾಗೂ ಸಿ ಪಿ ಯೋಗೇಶ್ವರ್ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡ್ತಿರುವುದು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನು ಹಳ್ಳಿಹಕ್ಕಿ ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ಪಕ್ಷಕ್ಕೆ ನಷ್ಟ ಇಲ್ಲ. ಯಾರೋ ಒಬ್ಬಿಬ್ಬರು ಪಕ್ಷ ಬಿಡುವುದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಿಳಿಸಿದರು.