ಪುತ್ತೂರು(ದಕ್ಷಿಣ ಕನ್ನಡ): ಪುತ್ತೂರು ಪೇಟೆಯ ನೆಹರೂ ನಗರದಲ್ಲಿ ಸೋಮವಾರ ತಡರಾತ್ರಿ ಯುವಕನ ಬರ್ಬರ ಹತ್ಯೆ ನಡೆದಿದೆ. ಪ್ರಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್ ಕಲ್ಲೇಗ ಹತ್ಯೆಯಾಗಿದ್ದಾರೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಚೇತನ್, ಮನೀಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು. ಸೋಮವಾರ ಸಂಜೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್ ಹಾಗೂ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅಪಘಾತ ನಷ್ಟದ ಬಾಬ್ತು ಮಾತನಾಡಲೆಂದು ಪುನ: ಆರೋಪಿಗಳು ಅಕ್ಷಯ್‌ನನ್ನು ರಾತ್ರಿ 11.30 ಗಂಟೆ ಸುಮಾರಿಗೆ ನೆಹರೂ ನಗರ ಬಳಿ ಕರೆದು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯ ತುಸು ದೂರದಲ್ಲಿರುವ ಕೆನಾರ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್ ಮೇಲೆ ದಾಳಿ ನಡೆಸಿ, ಅಲ್ಲಿಂದ ಮಾಣಿ ಮೈಸೂರು ಹೆದ್ದಾರಿಯನ್ನು ದಾಚೆವರೆಗೂ ಅಟ್ಟಾಡಿಸಿಕೊಂಡು ಬಂದು ತಲವಾರಿನಿಂದ ಹಲ್ಲೆ ಮಾಡಿದ್ದಾರೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ.
ಕಾಲೇಜಿಗೆ ಹೋಗುವ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನಲ್ಲಿರುವ ಗಿಡಗಂಟಿಗಳಿಂದ ಅವೃತ್ತವಾದ ಜಾಗದಲ್ಲಿ ಅಕ್ಷಯ್ ಮೃತದೇಹ ಪತ್ತೆಯಾಗಿತ್ತು. ಒಟ್ಟು ಮೂವರಿದ್ದ ತಂಡ ಕೃತ್ಯ ಎಸಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪುತ್ತೂರು ಪೇಟೆಯಲ್ಲಿ ಎರಡು ತಿಂಗಳ ಅಂತರದಲ್ಲಿ ನಡೆದ ಎರಡನೇ ಹತ್ಯೆ ಇದಾಗಿದೆ. ಅಗಸ್ಟ್ ತಿಂಗಳ ಕೊನೆ ವಾರದಲ್ಲಿ ಭಗ್ನ ಪ್ರೇಮಿಯೊಬ್ಬ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ಯುವತಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದನು.
ಹೃದಯಾಘಾತದಿಂದ ವಿದ್ಯಾರ್ಥಿ ಸಾವು: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ಹೃದಯಾಘಾತದಿಂದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಯೂಸುಫ್ ಎಂಬವರ ಪುತ್ರ ಮಹಮ್ಮದ್ ಇರ್ಪಾನ್ (18 ವರ್ಷ) ಮೃತಪಟ್ಟ ವಿದ್ಯಾರ್ಥಿ.
ಪುತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಎ.ಸಿ ಮೆಕ್ಯಾನಿಕ್ ವ್ಯಾಸಂಗ ಮಾಡುತ್ತಿದ್ದ ಇರ್ಪಾನ್ ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದಿದ್ದರು. ಸಂಜೆ 6 ಗಂಟೆಯ ವೇಳೆಗೆ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿದ್ದು, ತಕ್ಷಣವೇ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆ ವೇಳೆಗಾಗಲೇ ಹೃದಯಾಘಾತಕ್ಕೆ ಒಳಗಾಗಿ ಯುವಕ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹಳೆ ವೈಷಮ್ಯ-ವ್ಯಕ್ತಿ ಭೀಕರ ಹತ್ಯೆ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಅ.30ರಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ರಬಣಕಲ್ ಗ್ರಾಮದ ಪ್ರಸಾದ್ (38) ಕೊಲೆಯಾದವರು. ಬೆಳಿಗ್ಗೆ ಭತ್ತದ ಗದ್ದೆಗೆ ನೀರು ಕಟ್ಟಲು ತೆರಳಿದ್ದಾಗ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕನ ಬಂಧನ