ಕರ್ನಾಟಕ

karnataka

ETV Bharat / state

ಶಬರಿಮಲೆ ಅಯ್ಯಪ್ಪ ಸಾನಿಧ್ಯದಲ್ಲಿ ಇದೇ ಮೊದಲ ಬಾರಿಗೆ ಯಕ್ಷಗಾನದ ಝೇಂಕಾರ; ಮಲಯಾಳಿಗಳ ನಾಡಿನಲ್ಲಿ ಅನುರಣಿಸಿದ ತುಳುಭಾಷೆ - ಮಂಗಳೂರು ಸುದ್ದಿ

ಕೇರಳದ ಶಬರಿಮಲೆಯ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆದಿದೆ.

ಯಕ್ಷಗಾನ
ಯಕ್ಷಗಾನ

By

Published : Jul 21, 2023, 2:04 PM IST

ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ನಡೆದ ಯಕ್ಷಗಾನ ಪ್ರದರ್ಶನ

ಮಂಗಳೂರು:ತುಳುಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಬೇಕೆಂದು ಮೊನ್ನೆ ತಾನೇ ಕರಾವಳಿಯ ಶಾಸಕರು ಸದನದಲ್ಲಿಯೇ ತುಳುವಿನಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದರು. ತುಳು ಭಾಷೆಯಲ್ಲಿ ನಡೆಯುವ ಯಕ್ಷಗಾನ ದೇಶ-ವಿದೇಶಗಳಲ್ಲಿ ಪ್ರದರ್ಶನವಾಗಿದೆ. ಇದೀಗ ಮಲಯಾಳಿಗಳ ನಾಡಿನಲ್ಲಿ ತೆಂಕುತಿಟ್ಟಿನ ತುಳು ಯಕ್ಷಗಾನದ ಝೇಂಕಾರ ಕೇಳಿ ಬಂದಿದೆ.

ಕರಾವಳಿಯ ಸೊಬಗು ಯಕ್ಷಗಾನ ಎಲ್ಲರ ಗಮನಸೆಳೆಯುವ ಕಲಾ ಪ್ರಕಾರ. ಯಕ್ಷಗಾನದ ಮೂಲಕ ಪೌರಾಣಿಕ ಕಥೆಗಳನ್ನು ಕಣ್ತುಂಬಿಕೊಳ್ಳುವ ಈ ಕರಾವಳಿಯ ಕಲೆ ದೇಶ ವಿದೇಶದಲ್ಲಿ ಪ್ರದರ್ಶಿತವಾಗಿದೆ. ಇದೀಗ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ ಯಕ್ಷಗಾನದ ಝೇಂಕಾರ ಕೇಳಿ ಬಂದಿದೆ. ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ತುಳುನಾಡಿನ ಜನಪ್ರಿಯ ಕಲೆಯ ಪ್ರದರ್ಶನವಾಗಿದೆ.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಮೇಳದ ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ಸಂಯೋಜನೆಯಲ್ಲಿ 'ಕ್ಷೇತ್ರಪಾಲ ಉದ್ಧರಣ' ಎಂಬ ತುಳು ಯಕ್ಷಗಾನ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಸೊಗಸಾಗಿ ಮೂಡಿಬಂತು. ಹಿಮ್ಮೇಳದಲ್ಲಿ ಭಾಗವತರಾಗಿ ಧೀರಜ್ ರೈ ಸಂಪಾಜೆ, ಮದ್ದಳೆಯಲ್ಲಿ ರೋಹಿತ್ ಉಚ್ಚಿಲ, ಚೆಂಡೆಯಲ್ಲಿ ಜಿತೇಶ್ ಕೋಳ್ಯೂರು ಇದ್ದರೆ. ಮುಮ್ಮೇಳದಲ್ಲಿ ಕ್ಷೇತ್ರಪಾಲನಾಗಿ ದಿನೇಶ್ ಕೋಡಪದವು, ದುರ್ಗೆಯಾಗಿ ಕಾರ್ತಿಕ್ ಗಂಜಿಮಠ ಪಾತ್ರ ನಿರ್ವಹಿಸಿದ್ದರು.

ಬುಧವಾರ ಸಂಜೆ 5.30ಗೆ ಮುಕ್ಕಾಲು ಗಂಟೆಗಳ ಕಾಲ ಇಲ್ಲಿ ಯಕ್ಷಗಾನ ಪ್ರದರ್ಶನ ನಡೆದಿದೆ. ದೇವಾಲಯದ ಆವರಣದಲ್ಲಿ ಕಲಾ ಪ್ರದರ್ಶನ ಆಗಬೇಕಿದ್ದಲ್ಲಿ ನ್ಯಾಯಾಲಯದ ಅನುಮತಿ ಬೇಕು. ಆದ್ದರಿಂದ 18 ಮೆಟ್ಟಿಲಿನ ಕೆಳಗಿರುವ ಕಲಾಮಂಟಪದಲ್ಲಿ ಯಕ್ಷಗಾನ ಪ್ರದರ್ಶನ ನಡೆಸಲು ಅವಕಾಶ ಸಿಕ್ಕಿತ್ತು.

ವಿಶೇಷವೆಂದರೆ ಹಿಮ್ಮೇಳ ಕಲಾವಿದರು ಅಯ್ಯಪ್ಪ ವೃತಾನುಷ್ಠಾನದ ಕಪ್ಪುವಸ್ತ್ರದಲ್ಲಿಯೇ ಕೆಳಗಡೆ ಕುಳಿತೇ ಯಕ್ಷಗಾನ ಸೇವೆ ಮಾಡಿದ್ದಾರೆ. ಅಲ್ಲದೆ ಯಕ್ಷಗಾನ ಮುಗಿದ ಬಳಿಕ ವೇಷಧಾರಿಗಳಿಗೆ ಯಕ್ಷಗಾನದ ವೇಷದಲ್ಲಿಯೇ ದೇವಸ್ಥಾನದೊಳಗಡೆ ಪ್ರವೇಶಕ್ಕೆ ಆಡಳಿತ ಮಂಡಳಿ ಅವಕಾಶ ನೀಡಿದೆ. ಆದ್ದರಿಂದ ವೇಷಧಾರಿಗಳು ಯಕ್ಷಗಾನದ ವೇಷದಲ್ಲಿಯೇ ಅಯ್ಯಪ್ಪನ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ.

ಕಲಾವಿದ ದಿನೇಶ್ ಕೋಡಪದವು ಮಾತನಾಡಿ ಕ್ಷೇತ್ರಪಾಲ ಉದ್ಧರಣ' ಎಂಬ ತುಳು ಯಕ್ಷಗಾನ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಸೊಗಸಾಗಿ ಮೂಡಿಬಂದಿದೆ. ಅಯ್ಯಪ್ಪ ಸನ್ನಿಧಾನದಲ್ಲಿ ಯಕ್ಷಗಾನ ಸೇವೆ ನೀಡಬೇಕೆಂಬ‌ ಇಚ್ಚೆ ಇತ್ತು. ಹಿಮ್ಮೇಳ ಕಲಾವಿದರು ಅಯ್ಯಪ್ಪ ವೃತಾನುಷ್ಠಾನದ ಕಪ್ಪುವಸ್ತ್ರದಲ್ಲಿಯೇ ಕೆಳಗಡೆ ಕುಳಿತೇ ಯಕ್ಷಗಾನ ಸೇವೆ ಮಾಡಿದ್ದಾರೆ. ಅಲ್ಲದೆ ಯಕ್ಷಗಾನ ಮುಗಿದ ಬಳಿಕ ವೇಷಧಾರಿಗಳಿಗೆ ಯಕ್ಷಗಾನದ ವೇಷದಲ್ಲಿಯೇ ದೇವಸ್ಥಾನದೊಳಗಡೆ ಪ್ರವೇಶಕ್ಕೆ ಆಡಳಿತ ಮಂಡಳಿ ಅವಕಾಶ ನೀಡಿದೆ. ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ದೊರಕಿದ್ದು ನಮಗೆ ದೊರೆತ ಸುಯೋಗ ಎಂದು ತಿಳಿಸಿದ್ದಾರೆ.

ಕರಾವಳಿಯ ಯಕ್ಷಗಾನ ದೇಶ ವಿದೇಶಗಳಲ್ಲಿ ಪರಿಚಿತ. ತುಳುನಾಡಿನ ಈ ಜನಪ್ರಿಯ ಕಲೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೀಗ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಯಕ್ಷಗಾನ ನಡೆದಿರುವುದು ಯಕ್ಷಗಾನ ರಂಗದಲ್ಲಿ ಇದೊಂದು ಮೈಲುಗಲ್ಲಾಗಿ ದಾಖಲಾಗಲಿದೆ.

ಇದನ್ನೂ ಓದಿ:ದೇವಾಲಯದಲ್ಲಿ ಮೊಬೈಲ್ ಸ್ವಿಚ್ ಆಫ್ ಆದೇಶ.. ಕರಾವಳಿಯ ಹಲವು ದೇವಸ್ಥಾನಗಳಲ್ಲಿ ಆದೇಶಕ್ಕೂ ಮೊದಲೇ ಪಾಲನೆ

ABOUT THE AUTHOR

...view details