ಕರ್ನಾಟಕ

karnataka

By

Published : Aug 16, 2021, 6:31 PM IST

ETV Bharat / state

12 ಮಂದಿ ವೃತ್ತಿಪರ ಕಾಡುಪ್ರಾಣಿ ಬೇಟೆಗಾರರ ಬಂಧನ: 2 ಕಾರುಗಳ ಸಹಿತ ಅನೇಕ ಮಾರಕಾಸ್ತ್ರಗಳ ವಶ

ಕಾಡುಪ್ರಾಣಿಗಳನ್ನು ಬೇಟೆಯಾಡ್ತಿದ್ದ 12 ಜನರನ್ನು ಮೂಡುಬಿದಿರೆ ತಾಲೂಕಿನ ಗ್ರಾಮವೊಂದರ ಬಳಿ ಪೊಲೀಸರು ಬಂಧಿಸಿದ್ದಾರೆ.

wild animal hunters arrested in Mudbidri
ವೃತ್ತಿಪರ ಕಾಡುಪ್ರಾಣಿಗಳ ಬೇಟೆಗಾರರ ಬಂಧನ

ಮಂಗಳೂರು:ಕಾಡುಪ್ರಾಣಿಗಳ ಬೇಟೆ ಮಾಡುತ್ತಿದ್ದ 12 ಮಂದಿ ವೃತ್ತಿಪರ ಬೇಟೆಗಾರರನ್ನು ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಎಂಬಲ್ಲಿ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತರಿಂದ ಎರಡು ಓಮ್ನಿ ಕಾರುಗಳು, ಬೇಟೆಯಾಡಿದ ಎರಡು ಕಾಡು ಹಂದಿಗಳು ಹಾಗೂ ಸಾಕಷ್ಟು ಮಾರಕಾಸ್ತ್ರಗಳು ಮತ್ತು ಬಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಡುಬಿದಿರೆ ಆಸುಪಾಸು ನಿವಾಸಿಗಳಾದ ಜಾನ್ ಸಿ. ಮಿನೆಜಸ್, ಶ್ರೀನಿವಾಸ, ಗುರುಪ್ರಸಾದ್, ಜೋಯಲ್ ಅನಿಲ್ ಡಿಸೋಜಾ, ಅಜಯ್, ಸನತ್, ಹರೀಶ್ ಪೂಜಾರಿ, ಮೋಹನ್ ಗೌಡ, ನೋಣಯ್ಯ, ವಿನಯ್ ಪೂಜಾರಿ, ರಮೇಶ್, ಗಣೇಶ್ ಬಂಧಿತ ಆರೋಪಿಗಳು.

ವೃತ್ತಿಪರ ಕಾಡುಪ್ರಾಣಿಗಳ ಬೇಟೆಗಾರರ ಬಂಧನ

ಕಾಡುಪ್ರಾಣಿಗಳ ಬೇಟೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿದ್ದಾರೆ. ಈ ಸಂದರ್ಭ 12 ಮಂದಿ ವೃತ್ತಿಪರ ಬೇಟೆಗಾರರು ಕೃಷಿಯನ್ನು ಕಾಡುಪ್ರಾಣಿಗಳಿಂದ ರಕ್ಷಣೆ ಮಾಡುವ ಉದ್ದೇಶದಿಂದ ನೀಡಲಾಗಿರುವ ಗನ್ ಸೇರಿದಂತೆ ಬಂದೂಕು, ಈಟಿ, ಭರ್ಜಿ, ಬಲೆ, ಕತ್ತಿ ಮುಂತಾದ ಮಾರಕ ಅಸ್ತ್ರಗಳನ್ನು ಹೊಂದಿದ್ದರು.

ಈ‌‌ ಸಂದರ್ಭ ಬೇಟೆಗಾರರು ಕೊಂದಿರುವ ಎರಡು ಹಂದಿಗಳೂ ದೊರೆತಿದ್ದು, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾರುಗಳು ಸೇರಿದಂತೆ ಎಲ್ಲ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 12 ಮಂದಿಯನ್ನು ಬಂಧಿಸಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ‌.

ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಈ ತಂಡ ಕೃಷಿ ರಕ್ಷಣೆಗಾಗಿ ನೀಡಿರುವ ನಾಲ್ಕು ಎಸ್ ಪಿಎಲ್ ಬಂದೂಕುಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೇ ಈ ಹಿಂದೆಯೂ ಅವರು ಸಾಕಷ್ಟು ಕಾಡುಪ್ರಾಣಿಗಳನ್ನು ಕೊಂದಿರುವುದಾಗಿಯೂ ತಿಳಿದು ಬಂದಿದೆ. ಆದ್ದರಿಂದ 12 ಮಂದಿಯನ್ನು ಬಂಧಿಸಿದ್ದು, ಇನ್ನೂ ಇದರಲ್ಲಿ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಕಮಿಷನರ್ ತಿಳಿಸಿದ್ರು.

ABOUT THE AUTHOR

...view details