ಮಂಗಳೂರು (ದ.ಕ): ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಹೆಚ್ಚುತ್ತಿದ್ದು, ಲವ್ ಜಿಹಾದ್ ವಿರುದ್ಧ ಸರ್ಕಾರ ಕಾನೂನು ತರಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸ್ ಇಲಾಖೆಯ ರಿವ್ಯೂ ಮಾಡಿ ಕಾನೂನು ಸುವ್ಯವಸ್ಥೆ ಸರಿಪಡಿಸಲಿ ಎಂದರು.
ಮಂಗಳೂರಿನಲ್ಲಿ ನಡೆದ ನೈತಿಕ ಪೊಲೀಸ್ಗಿರಿ ಕುರಿತು ಯು.ಟಿ.ಖಾದರ್ ಪ್ರತಿಕ್ರಿಯೆ ಲವ್ ಜಿಹಾದ್ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನು ತರಲಿ. ಆ ಬಳಿಕ ಅಂತದ್ದು ನಡೆಯುವುದಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ. ಗ್ರಾಪಂ ಚುನಾವಣೆ ಸಮಯದಲ್ಲಿ ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಲವ್ ಜಿಹಾದ್ ಕಾನೂನು ತರಲು ನಿರ್ಣಯ ಮಾಡಿದ್ದರು. ಗ್ರಾಪಂ ಚುನಾವಣೆ ಬಳಿಕ ಅದನ್ನು ಮರೆತುಬಿಟ್ಟಿದ್ದಾರೆ. ಅಲ್ಲಲ್ಲಿ ಭಾಷಣ ಮಾಡಿ ಯುವಕರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಬಜರಂಗದಳದವರು ಸುದ್ದಿಗೋಷ್ಠಿ ಮಾಡಿ ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಬಜರಂಗದಳದವರಿಗೆ ಧೈರ್ಯ ಇದ್ದರೆ ಲವ್ ಜಿಹಾದ್ ಕಾನೂನು ತರಲು ಆಗ್ರಹಿಸಿ ಪ್ರತಿಭಟನೆ ಮಾಡಲಿ. ಇಲ್ಲದಿದ್ದರೆ ನಿಮ್ಮೊಂದಿಗೆ ಇರುವುದಿಲ್ಲ ಎಂದು ತಿಳಿಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಬೆಂದೂರು ಚರ್ಚ್ ಕಛೇರಿಗೆ ನುಗ್ಗಿದ ಕಳ್ಳ: 4 ಲಕ್ಷ ರೂ. ನಗದು ದೋಚಿ ಪರಾರಿ