ದೇವನಹಳ್ಳಿ : ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಪ್ರವೇಶಿಸಲು ದಲಿತ ವ್ಯಕ್ತಿಯೊಬ್ಬರಿಗೆ ಮೇಲ್ವರ್ಗದವರು ನಿರಾಕರಿಸಿರುವ ಆರೋಪ ದೇವನಹಳ್ಳಿಯಲ್ಲಿ ಕೇಳಿಬಂದಿದೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸೌಹಾರ್ದ ಸಭೆ ನಡೆಸಿ ಜಾಗೃತಿ ಮೂಡಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಶಾನಪ್ಪನಹಳ್ಳಿ ಚನ್ನಕೇಶವ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಕಡೆ ಕಾರ್ತಿಕ ಸೋಮವಾರದಂದು ದಲಿತ ಸಮುದಾಯದವರಾದ ಸೋಲೂರಿನ ಮಂಜುನಾಥ್ ಎಂಬವರು ಸಂಜೆ 7:30ಕ್ಕೆ ದೇವಸ್ಥಾನಕ್ಕೆ ಹೋಗಿದ್ದಾರೆ. ಈ ವೇಳೆ, ಗ್ರಾಮದ ಮೇಲ್ವರ್ಗಕ್ಕೆ ಸೇರಿದ ಮಹಿಳೆಯರು ಹಾಗೂ ಚನ್ನಕೇಶವ ಮತ್ತು ಕೆಂಪಣ್ಣ ಎಂಬುವವರು ಮಂಜುನಾಥ ಅವರನ್ನು ತಡೆದಿದ್ದಾರೆ. ನಮ್ಮ ಗ್ರಾಮದ ದೇವಸ್ಥಾನಕ್ಕೆ ಹಿಂದಿನಿಂದಲೂ ನಿಮ್ಮ ಜಾತಿಯವರಿಗೆ ಬರಬಾರದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಮಂಜುನಾಥ್ ಅವರಿಗೆ ತಾಕೀತು ಮಾಡಿದ್ದಾರೆ.