ಮಂಗಳೂರು: ಅಕ್ಕಿ, ನಾಣ್ಯ , ಬಾಳೆ ಹಣ್ಣು, ತೆಂಗಿನ ಕಾಯಿ ಹೀಗೆ ನಾನಾ ಬಗೆಯ ವಸ್ತುಗಳ ಮೂಲಕ ತುಲಾಭಾರ ಸೇವೆ ನಡೆಯುವುದು ನೋಡಿರುತ್ತೇವೆ. ಆದರೆ, ಮಂಗಳೂರಿನಲ್ಲಿ ಪೇಜಾವರ ಯತಿಗಳಿಗೆ ವೃಕ್ಷ ಬೀಜ ತುಲಾಭಾರ ನಡೆಸುವ ಮೂಲಕ ಪರಿಸರ ಸೇವೆ ಮಾಡುವ ವಿಶೇಷ ಪ್ರಯತ್ನವೊಂದು ನಡೆಯಿತು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ಪ್ರತಿ ವರ್ಷ ಗುರು ವಂದನೆಯಾಗಿ ನಾಣ್ಯಗಳ ತುಲಾಭಾರ ಸೇವೆ ನಡೆಯುತ್ತಿದೆ. ಆದರೆ, ಈ ಬಾರಿ ನಾಣ್ಯಗಳ ತುಲಾಭಾರ ಸೇವೆಯ ಬದಲಿಗೆ ಪರಿಸರ ಉಳಿಸುವ ಪ್ರಯತ್ನವಾಗಿ ವೃಕ್ಷ ಬೀಜಗಳ ತುಲಾಭಾರ ಸೇವೆ ನಡೆಯಿತು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರ ನಿವಾಸದಲ್ಲಿ ಪೇಜಾವರ ಶ್ರೀಗಳಿಗೆ ಗುರು ವಂದನಾ ಕಾರ್ಯಕ್ರಮವಾಗಿ ತುಲಾಭಾರ ಸೇವೆ ನಡೆಯುತ್ತದೆ. ಈ ಬಾರಿ ತುಲಾಭಾರ ಸೇವೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಮರ ಗಿಡಗಳನ್ನು, ಸಸಿಗಳನ್ನು ಬಳಸಲಾಯಿತು. ಮಾವಿನ ಮರ, ಅಡಕೆ ಮರ, ಹಲಸಿನ ಮರ, ಅಶ್ವತ್ಥ ಮರ ಸೇರಿದಂತೆ ವಿವಿಧ ಬಗೆಯ ಮರಗಳ ಗಿಡಗಳನ್ನು ತುಲಾಭಾರ ಸೇವೆಗೆ ಬಳಸಲಾಯಿತು.
ಈ ಬಗ್ಗೆ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಪ್ರತಿ ವರ್ಷ ಗುರುವಂದನೆ ಯಾಗಿ ಪೇಜಾವರ ಶ್ರೀಗಳಿಗೆ ತುಲಾಭಾರ ಸೇವೆ ಮಾಡುತ್ತಿದ್ದೇವೆ. ಆದರೆ, ಈ ಬಾರಿ ಹೊಸ ಪ್ರಯತ್ನ ಮಾಡಿದ್ದೇವೆ. ನಾಣ್ಯಗಳ ಬದಲಿಗೆ ವೃಕ್ಷ ಬೀಜಗಳ ಮೂಲಕ ತುಲಾಭಾರ ಸೇವೆ ಮಾಡಿದ್ದೇವೆ. ಕಾರಿನಲ್ಲಿ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ತಲುಪಿದಂತೆ ತಾಪಮಾನ ಏರಿಕೆಯಾಗುತ್ತಾ ಹೋಗುವುದನ್ನು ಗಮನಿಸಿದ್ದೇವೆ. ಮರಗಳ ರಾಶಿ ಇರುವಲ್ಲಿ ತಾಪಮಾನ ಇಳಿಕೆಯಾಗುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ವಿಚಾರ ಹೊಳೆದಿದೆ. ಅದರಂತೆ ಪ್ರತಿ ವರ್ಷ ಮಾಡುವ ತುಲಾಭಾರ ಸೇವೆಯನ್ನು ಈ ಬಾರಿ ವೃಕ್ಷ ಬೀಜಗಳ ಮೂಲಕ ಮಾಡಲು ನಿರ್ಧರಿಸಲಾಯಿತು.