ಮಂಗಳೂರು:ಬಿಜೆಪಿ ಅಭ್ಯರ್ಥಿಗಳ ಪರ ನಾಳೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ನಗರಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ನಗರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ನಗರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಮಾಡಲಿದ್ದು, ಇದಕ್ಕಾಗಿ ನೆಹರು ಮೈದಾನದಲ್ಲಿ ವೇದಿಕೆ ಸಿದ್ದ ಕಾರ್ಯ ನಡೆಯುತ್ತಿದೆ. ವೇದಿಕೆ ಸುತ್ತ ಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಲ್ಲದೆ ಮೈದಾನಕ್ಕೆ ಬರುವವರ ಪ್ರತಿಯೊಬ್ಬರ ಮಾಹಿತಿ ದಾಖಲಿಸಿ ಒಳಬಿಡಲಾಗುತ್ತಿದೆ. ವೇದಿಕೆ ನಿರ್ಮಾಣ ಮಾಡುವ ಕಾರ್ಮಿಕರಿಗೂ ಪಾಸ್ ನೀಡಲಾಗಿದೆ.
ಮೋದಿ ಪ್ರಚಾರ ಕಾರ್ಯಕ್ಕೆ ಸಜ್ಜಾಗಿರುವ ವೇದಿಕೆ ನಾಳೆ ಮಧ್ಯಾಹ್ನ 3.30 ಕ್ಕೆ ಮೋದಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮುಗಿದ ಬಳಿಕ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಪ್ರಧಾನಮಂತ್ರಿಯಾದ ಬಳಿಕ ನಡೆಸುತ್ತಿರುವ ಎರಡನೇ ಪ್ರಚಾರ ಭಾಷಣ ಇದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಭಾಷಣ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಈ ಬಾರಿ ಮತ್ತೆ ಮೋದಿ ಅವರ ಪ್ರಚಾರದಿಂದ ಕಳೆದ 28 ವರ್ಷಗಳಿಂದ ಬಿಜೆಪಿ ಜಯಿಸಿರುವ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ವಿಜಯಿಯಾಗಲಿದೆ ಎಂಬ ವಿಶ್ವಾಸವನ್ನು ಬಿಜೆಪಿಯವರು ವ್ಯಕ್ತಪಡಿಸುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರು ಪಾಲ್ಗೊಳ್ಳಲು ಬೇಕಾದ ತಯಾರಿ ಮಾಡಲಾಗುತ್ತಿದ್ದು, ಪ್ರತಿ ಬೂತ್ನಿಂದ 50 ಮಂದಿ ಬಂದರೆ ಒಂದು ಲಕ್ಷ ಜನ ಸೇರಲಿದ್ದಾರೆ ಎಂಬ ವಿಶ್ಚಾಸವಿದೆ. ಅದಕ್ಕಾಗಿ ತಯಾರಿ ನಡೆಯುತ್ತಿದೆ. ಅಲ್ಲದೆ ವಿಮಾನನಿಲ್ದಾಣದಿಂದ ನೆಹರು ಮೈದಾನದವರೆಗೆ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕಾರ್ಯಕ್ರಮ ಸ್ಥಳದವರೆಗೆ ವಾಹನದಲ್ಲಿ ಬರಲು ಅವಕಾಶವಿಲ್ಲ. ಸಂಚಾರ ಅಸ್ತವ್ಯಸ್ತತೆ ಆಗುವ ನೆಲೆಯಲ್ಲಿ ಪಾರ್ಕಿಂಗ್ಗೆ ಸ್ಥಳವನ್ನು ಗುರುತಿಸಲಾಗಿದೆ. ಪ್ರಧಾನಿ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಏರ್ಪಡಿಸಿದೆ.